ಸಾಮಾಜಿಕ ಪಿಡುಗುಗಳ ವಿರುದ್ಧ ಕಾಯಕ ಶರಣರ ಹೋರಾಟ ಹಿರಿದು

| Published : Feb 11 2025, 12:47 AM IST

ಸಾರಾಂಶ

12ನೇ ಶತಮಾನ ಶಿವಶರಣರ ಶತಮಾನವಾಗಿದೆ. ಕಾಯಕದ ಜತೆಗೆ ಶರಣರು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ವಚನಗಳ ಮೂಲಕ ಸಮಾಜ ಸುಧಾರಿಸುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದ್ದಾರೆ.

- ಡಿಸಿ ಕಚೇರಿಯಲ್ಲಿ ಕಾಯಕ ಶರಣರ ಜಯಂತಿಯಲ್ಲಿ ಎಡಿಸಿ ಲೋಕೇಶ್‌ - - - ಕನ್ನಡಪ್ರಭ ವಾರ್ತೆ ದಾವಣಗೆರೆ 12ನೇ ಶತಮಾನ ಶಿವಶರಣರ ಶತಮಾನವಾಗಿದೆ. ಕಾಯಕದ ಜತೆಗೆ ಶರಣರು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ವಚನಗಳ ಮೂಲಕ ಸಮಾಜ ಸುಧಾರಿಸುವ ಕೆಲಸ ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತಾನಾಡಿದರು.

ತಾರತಮ್ಯ, ಅಸಮಾನತೆ, ಲಿಂಗ ತಾರತಮ್ಯ, ಜಾತಿಭೇದ ಎಂಬ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಶರಣರು ಹೋರಾಟ ನಡೆಸಿದವರು. ಈ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕಲ್ಯಾಣದ ಕ್ರಾಂತಿಯಲ್ಲಿ ಇಡೀ ಶರಣರ ಹೋರಾಟವಿದೆ. ಬಸವ ಕಲ್ಯಾಣ ಎಂಬುದು ಒಬ್ಬರಿಂದ ಮಾತ್ರವಲ್ಲದೇ, ಸಮಾಜದ ಕಟ್ಟಕಡೆಯಿಂದ ಬಂದ ಐದು ಜನ ಕಾಯಕ ಶರಣರ ಪಾತ್ರ ಪ್ರಮುಖವಾಗುತ್ತದೆ. ಇವರ ಬಗ್ಗೆ ಬಸವಣ್ಣನರು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ, ಒಬ್ಬ ಅಜ್ಞಾನವಂತನೂ ಪರಿವರ್ತನೆಯಿಂದ ಮಹಾಜ್ಞಾನಿಯಾಗುತ್ತಾನೆ ಎಂದರು.

ಸಾಹಿತಿ ಡಾ.ರಾಮಚಂದ್ರಪ್ಪ ಮಾತನಾಡಿ, ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಹಾಗೂ ಉರಿಲಿಂಗ ಪೆದ್ದಿ ಶರಣರ ವಚನಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ಓದಿಸುವುದರ ಜತೆಗೆ ಅವುಗಳನ್ನು ವಿಮರ್ಶೆಗೊಳಪಡಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಮುನ್ನಡೆದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಕಲಾವಿದರಾದ ಹೆಗ್ಗೆರೆ ರಂಗಪ್ಪ ಮತ್ತು ಕಲಾ ತಂಡದವರಿಂದ ವಚನಗಾಯನ ನಡೆಸಲಾಯಿತು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನವೀನ್ ಮಠದ್, ಡಿಡಿಪಿಐ ಕೊಟ್ರೇಶ್, ಮುಖಂಡರಾದ ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

- - - -10ಕೆಡಿವಿಜಿ43.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಿಸಲಾಯಿತು.