ಸಂಘನಿಕೇತನದಲ್ಲಿ ಶನಿವಾರ ಕರ್ನಾಟಕ ಬ್ಯಾಂಕ್‌ ಆಫೀಸರ್ಸ್‌ ಆರ್ಗನೈಝೇಶನ್‌ (ಕೆಬಿಒಒ)ನ 20ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು.

ಮಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಾಂತ್ರಿಕತೆ ಅಳವಡಿಕೆ ಕ್ಷಿಪ್ರಗತಿಯಲ್ಲಿದ್ದು, ಇದಕ್ಕೆ ಅನುಗುಣವಾಗಿ ಸೈಬರ್‌ ಭದ್ರತೆಯನ್ನು ಇನ್ನಷ್ಟು ಶಕ್ತಿಯುತಗೊಳಿಸುವ ಅಗತ್ಯವಿದೆ ಎಂದು ಬ್ಯಾಂಕ್‌, ಫೈನಾನ್ಸ್‌, ಇನ್ಫೋ ಸೆಕ್ಯುರಿಟಿ ಕನ್ಸಲ್ಟೆಂಟ್‌ ನಾಗರಾಜನ್‌ ಸುಬ್ಬು ಹೇಳಿದ್ದಾರೆ.ನಗರದ ಸಂಘನಿಕೇತನದಲ್ಲಿ ಶನಿವಾರ ಕರ್ನಾಟಕ ಬ್ಯಾಂಕ್‌ ಆಫೀಸರ್ಸ್‌ ಆರ್ಗನೈಝೇಶನ್‌ (ಕೆಬಿಒಒ)ನ 20ನೇ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕಿಂಗ್ ಕ್ಷೇತ್ರ ಈಗ ಡಿಜಿಟಲೀಕರಣವಾಗಿ ವಿಕಸನಗೊಂಡಿದ್ದು, ಅತಿ ಹತ್ತಿರದ ಭವಿಷ್ಯದಲ್ಲಿ ಭೌತಿಕವಾಗಿ ಬ್ಯಾಂಕ್‌ ಶಾಖೆಗಳೇ ಇಲ್ಲದ ದಿನಗಳು ಬರಲಿವೆ. ಮೆಟಾವರ್ಸ್ ಬ್ಯಾಂಕಿಂಗ್ ಎಲ್ಲಡೆ ಆವರಿಸಲಿದೆ ಎಂದು ಭವಿಷ್ಯ ನುಡಿದ ನಾಗರಾಜನ್‌ ಸುಬ್ಬು, ಭಾರತದಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೆಟಾವರ್ಸ್‌ನ್ನು ಈಗಾಗಲೇ ಅಳವಡಿಸಿದೆ, ಉಳಿದ ಬ್ಯಾಂಕ್‌ಗಳಿಗೂ ಇದು ವಿಸ್ತರಿಸಲಿದೆ. ಈ ಬದಲಾವಣೆಯೊಂದಿಗೆ ಸೈಬರ್‌ ಸೆಕ್ಯೂರಿಟಿಯ ಭಯವೂ ಇದ್ದು, ಭದ್ರತೆಯ ಬಗ್ಗೆ ಬ್ಯಾಂಕಿಂಗ್‌ ಕ್ಷೇತ್ರ ಇನ್ನಷ್ಟು ಮುಂದುವರಿಯುವ ಅಗತ್ಯವಿದೆ ಎಂದರು.ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಈ ಹಿಂದೆಯೇ ಡಿಜಿಟಲ್‌ ಕ್ರಾಂತಿ ಆಗಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ, ಕ್ಲೌಡ್‌, ರೊಬೊಟಿಕ್ಸ್‌ ತಂತ್ರಜ್ಞಾನದ ಹೊಸ ಅಧ್ಯಾಯ ನಡೆಯುತ್ತಿದೆ. 2025ರ ನಂತರದ ವರ್ಷಗಳಲ್ಲಿ ಡಿಜಿಟಲೀಕರಣವನ್ನೂ ಮೀರಿದ ಮೆಟಾವರ್ಸ್‌ ಈ ಕ್ಷೇತ್ರವನ್ನು ಆಳಲಿದೆ. ಈ ಹೊತ್ತಿನಲ್ಲಿ ಬ್ಯಾಂಕ್‌ ಅಧಿಕಾರಿಗಳು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ತಾಂತ್ರಿಕತೆಯನ್ನು ಕಲಿಯದಿದ್ದರೆ ಬ್ಯಾಂಕಿಂಗ್‌ ಕ್ಷೇತ್ರದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕರ್ಣಾಟಕ ಬ್ಯಾಂಕ್‌ ಈ ದೇಶದಲ್ಲಿ 100 ವರ್ಷ ಪೂರೈಸಿಕ ಏಕೈಕ ಖಾಸಗಿ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿದೆ. ಯುದ್ಧ, ಆರ್ಥಿಕ ಬಿಕ್ಕಟ್ಟು ಇಂಥ ಅನೇಕ ಸಂದರ್ಭಗಳಲ್ಲಿ ಈ ಬ್ಯಾಂಕ್‌ ಜನಸಂಪರ್ಕವನ್ನು ಬಿಡದೆ ಅಭಿವೃದ್ಧಿ ಹೊಂದುತ್ತಲೇ ಇದೆ. ರಾಜ್ಯಕ್ಕೆ ಕರ್ನಾಟಕ ಹೆಸರು ಬರುವ ಮೊದಲೇ ಕರ್ಣಾಟಕ ಬ್ಯಾಂಕಿನ ಹೆಸರೇ ಅದಾಗಿತ್ತು. ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮೊತ್ತಮೊದಲು ಆರಂಭಿಸಿದ ಕೀರ್ತಿ ಕರ್ಣಾಟಕ ಬ್ಯಾಂಕ್‌ನದ್ದು. ಈ ಬ್ಯಾಂಕನ್ನು ಸ್ಥಾಪಿಸಿದ ಮಹನೀಯರ ದೂರದೃಷ್ಟಿಗೆ ಇದು ಸಾಕ್ಷಿ ಎಂದು ನಾಗರಾಜನ್‌ ಸುಬ್ಬು ಹೇಳಿದರು.ಕರ್ಣಾಟಕ ಬ್ಯಾಂಕ್‌ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್‌. ಭಟ್‌, ಆಲ್‌ ಇಂಡಿಯಾ ಬ್ಯಾಂಕ್‌ ಆಫೀಸರ್ಸ್‌ ಎಸೋಸಿಯೇಶನ್‌ (ಎಐಬಿಒಎ) ಪ್ರಧಾನ ಕಾರ್ಯದರ್ಶಿ ಎಸ್‌. ನಾಗರಾಜನ್‌, ಎಐಕೆಬಿಇಎ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ.ಜಿ., ಎಐಬಿಒಎ ಅಧ್ಯಕ್ಷ ಸುರೇಶ್‌ ಎ.ಎನ್‌., ಕೆಬಿಒಒ ಅಧ್ಯಕ್ಷ ಕೆ. ರಾಘವ ವೇದಿಕೆಯಲ್ಲಿದ್ದರು. ಸುರೇಶ್‌ ಹೆಗ್ಡೆ ಸ್ವಾಗತಿಸಿದರು.