ಸರ್ಕಾರದ ನಿರ್ದೇಶನದಂತೆ ಈಗಾಗಲೇ ಲ್ಯಾಂಡ್‌ ಬೀಟ್‌ ಮೂಲಕ ಸರ್ಕಾರಿ ಭೂಮಿ ಒತ್ತುವರಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.

ಹೂವಿನಹಡಗಲಿ: ಸರ್ಕಾರದ ನಿರ್ದೇಶನದಂತೆ ಈಗಾಗಲೇ ಲ್ಯಾಂಡ್‌ ಬೀಟ್‌ ಮೂಲಕ ಸರ್ಕಾರಿ ಭೂಮಿ ಒತ್ತುವರಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಅನೇಕ ಕಡೆಗಳಲ್ಲಿ ತೆರವು ಕಾರ್ಯ ಮಾಡಿದ್ದು, ಉಳಿದ ಕಡೆ ಶೀಘ್ರದಲ್ಲೇ ತೆರವು, ಕಾರ್ಯ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಕಚೇರಿ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಉಳಿದಂತೆ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದರು.

ಭೂ ಮಾಪನ ಇಲಾಖೆಯಲ್ಲಿ ನಕಾಶೆ, ಆಕಾರ್‌ ಬಂದ್‌ ಸೇರಿದಂತೆ ಮಹತ್ವ ದಾಖಲೆಗಳೇ ಇಲ್ಲ. ಅರ್ಜಿ ಹಾಕಿದ ರೈತರಿಗೆ ನಮ್ಮಲ್ಲಿ ಲಭ್ಯ ಇಲ್ಲ ಎಂದು ಹಿಂಬರಹ ನೀಡುತ್ತಿದ್ದಾರೆ. ಅದನ್ನು ರಿಬಿಲ್ಟ್‌ ಕೂಡ ಮಾಡುತ್ತಿಲ್ಲ. ಕೇಳಿದರೆ ಸಿಬ್ಬಂದಿ ಕೊರತೆ ಎಂಬ ಕುಂಟ ನೆಪ ಹೇಳುತ್ತಾರೆಂಬ ಪ್ರಶ್ನೆಗೆ, ಸರ್ವೇಯರ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿ ಒಬ್ಬ ವ್ಯಕ್ತಿ ಮಾತ್ರ ಸರ್ಕಾರಿ ಭೂ ಮಾಪಕರಿದ್ದಾರೆ. ಈಗಾಗಲೇ 6 ಸರ್ವೇಯರ್‌ಗಳನ್ನು ನಿಯೋಜನೆ ಮಾಡಿ ಕೆಲಸ ನಡೆಯುತ್ತಿದೆ. ನಕಾಶೆ, ಆಕಾರ್‌ ಬಂದ್‌ ಸೇರಿದಂತೆ ಇತರೆ ದಾಖಲೆಗಳ ರಿಬಿಲ್ಟ್‌ ಮಾಡಲು ಒಂದೊಂದು ಗ್ರಾಮ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತೇವೆಂದು ಹೇಳಿದರು.

ಸ್ಮಶಾನ ಇಲ್ಲದ ಗ್ರಾಮಗಳಿಗೆ ಸರ್ಕಾರಿ ಭೂಮಿ ಲಭ್ಯ ಇದ್ದರೆ ನೀಡುತ್ತೇವೆ. ಇಲ್ಲದಿದ್ದರೆ ಭೂಮಿ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ನೀಡುತ್ತೇವೆ. ಹರವಿ ಗ್ರಾಮದಲ್ಲಿ ಸ್ಮಶಾನದಲ್ಲಿ ಮನೆಗಳ ನಿರ್ಮಾಣ ಕುರಿತು ಮಾಹಿತಿ ಪಡೆದು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ನಂತರದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಭೇಟಿ ನೀಡಿದ ಅವರು, ಹೊಸದಾಗಿ ವೃತ್ತ ನಿರ್ಮಾಣ ಮತ್ತು ಹೊಸ ಮೂರ್ತಿ ಪ್ರತಿಷ್ಠಾಪನೆಗಾಗಿ, ಈಗ ಇರುವ ಹಳೆ ಅಂಬೇಡ್ಕರ್‌ ಪ್ರತಿಮೆಯನ್ನು ತೆರವುಗೊಳಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿದ್ದರು.

ಪುಟ್‌ಪಾತ್‌ ಕಾಮಗಾರಿ ವೀಕ್ಷಿಸಿದ ಡಿಸಿ ಕವಿತಾ ಮನ್ನಿಕೇರಿ, ಪುಟ್‌ಪಾತ್‌ ಮೇಲಿನ ಎಲ್ಲ ಅಂಗಡಿಗಳ ತೆರವು ಮಾಡಿ ಅವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಪುರಸಭೆ ಮುಖ್ಯಾಧಿಕಾರಿ ಮತ್ತು ತಹಸೀಲ್ದಾರ್‌ ಜತೆಗೆ ಚರ್ಚಿಸಿದರು. ಇವರಿಗೆ ಈಗಾಗಲೇ ಕೆಲವು ಕಡೆಗಳಲ್ಲಿ ಜಾಗ ಗುರುತಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆಂದು ಪುರಸಭೆ ಮುಖ್ಯಾಧಿಕಾರಿ ಇಮಾಮಸಾಹೇಬ್‌ ಹೇಳಿದರು.

ಪಿಎಸ್‌ಐ ಮಣಿಕಂಠಗೆ ಎಚ್ಚರಿಕೆ: ಅಂಬೇಡ್ಕರ್‌ ವೃತ್ತಕ್ಕೆ ಡಿಸಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಕೇವಲ ಒಬ್ಬ ಮಹಿಳಾ ಪೊಲೀಸ್‌ ಮಾತ್ರ ಇದ್ದರು. ಈಗ ಜಾಗದಲ್ಲಿ ಸಾಕಷ್ಟು ಸಂಖ್ಯೆ ಜನ ನೆರೆದಿದ್ದರಿಂದ ಹಡಗಲಿ ಪಿಎಸ್‌ಐ ಎಲ್ಲಿ? ಎಂದು ಪ್ರಶ್ನಿಸಿದರು. ಠಾಣೆಯಲ್ಲಿ ಇರಬಹುದು ಎಂದು ಹೇಳಿದಾಗ, ಪಿಎಸ್‌ಐ ಮೇಲೆ ಮತ್ತಷ್ಟು ಗರಂ ಆದ ಡಿಸಿ, ಇಷ್ಟೊಂದು ಹೇಳಿ ಕಳಿಸಿದರೂ ಇನ್ನು ಬರಲಿಲ್ಲ. ಇವರ ಮೇಲೆ ಕೇಸ್‌ ಮಾಡುತ್ತೇನೆಂದು ಎಚ್ಚರಿಕೆ ನೀಡಿ, ಎಸ್ಪಿಯವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಕೂಡಲೇ ಪುಟ್‌ಪಾತ್‌ ವೀಕ್ಷಣೆ ಮಾಡುತ್ತಿದ್ದಾಗ ಪಿಎಸ್‌ಐ ಪ್ರತ್ಯಕ್ಷವಾದರು. ಎಲ್ಲಿಗೆ ಹೋಗಿದ್ದೀರಿ? ನಿಮಗೆ ಗೊತ್ತಾಗುವುದಿಲ್ಲವೇ? ಎಂದಾಗ, ಕೂಲಹಳ್ಳಿ ಗೋಣಿ ಬಸವೇಶ್ವರ ಕಾರ್ತಿಕೋತ್ಸವದ ಬಂದೋಬಸ್ತ್‌ಗೆ ಹೋಗಿದ್ದೆವು ಎಂದಾಗ, ಇಂತಹ ಘಟನೆ ಮರುಕಳಿಸಬಾರದು ಎಂದು ಪಿಎಸ್‌ಐ ಮಣಿಕಂಠ ಅವರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಸಂತೋಷಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಇಮಾಮ್‌ ಸಾಹೇಬ್‌, ತಾಪಂ ಇಒ ಪರಮೇಶ್ವರ ಇದ್ದರು.