ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಕಾಗುವ ಸೂಕ್ತ ಕ್ರಮ ಕೈಗೊಳ್ಳಲಾಗುವುದು

ಕಂಪ್ಲಿ: ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬೇಕಾಗುವ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.

ಪಟ್ಟಣದ ಹಜರತ್ ಸೈಯದ್ ಷಾಹ್ ಬಡೇಸಾಹೇಬ್ ಖಾದ್ರಿಯವರ ದರ್ಗಾಕ್ಕೆ ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಅಧಿವೇಶನದಲ್ಲಿ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದು, ಈ ಭಾಗದ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ. ಶಾಸಕರಿಂದ ಪ್ರಸ್ತಾಪಿಲ್ಪಡುವ ಎಲ್ಲ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಸಮಗ್ರ ಉತ್ತರ ನೀಡಲಿದ್ದಾರೆ. ಉತ್ತರ ಕರ್ನಾಟಕ ಭಾಗವು ಹಲವು ವರ್ಷಗಳಿಂದ ಅಭಿವೃದ್ಧಿಯ ಕೊರತೆಯನ್ನು ಅನುಭವಿಸುತ್ತಿದ್ದು, ಈ ಹಿನ್ನೆಲೆ ಸರ್ಕಾರವು ವಿಶೇಷ ಗಮನಹರಿಸಿದೆ. ಶಾಸಕರ ನಿರಂತರ ಕಾಳಜಿ ಹಾಗೂ ಒತ್ತಾಯದ ಫಲವಾಗಿ ಕಂಪ್ಲಿ ಮತ್ತು ಕುರುಗೋಡು ಕ್ಷೇತ್ರಗಳು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿವೆ. ಕಂಪ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ಲಭ್ಯವಾಗುವಂತೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಇದೇ ವೇಳೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೇವೆಯನ್ನು ಸ್ಮರಿಸಿದ ಅವರು, ಅವರು ರಾಜ್ಯದ ಅಭಿವೃದ್ಧಿಗಾಗಿ ದೀರ್ಘಕಾಲ ಶ್ರಮಿಸಿದ ಅನುಭವಿ ಹಾಗೂ ನಿಷ್ಠಾವಂತ ನಾಯಕರಾಗಿದ್ದಾರೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎಂದರು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತ ಹಾಗೂ ಮುದ್ದಾಪುರ ಅಗಸಿಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಮುಸ್ಲಿಂ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾಹ್ ಅಬುಲ್‌ಹಸನ್ ಖಾದ್ರಿ, ಸೈಯದ್ ಷಾಹ್ ಮೆಹಮೂದ್ ಖಾದ್ರಿ ಉಪಸ್ಥಿತರಿದ್ದು, ಪ್ರಮುಖರಾದ ಅಕ್ಕಿ ಜಿಲಾನ್, ಸೈಯದ್ ಶುಕ್ರು, ಬಿ.ಜಾಫರ್ ಸಾಧಿಕ್, ಆರ್.ಜಿಲಾನ್, ಕೆ.ಮೆಹಬೂಬ್, ಯಾಳ್ಪಿ ಮುನಾಫ್, ಎನ್.ಮೌಲಾ ಹುಸೇನ್, ಕೆ.ಮಸ್ತಾನ್‌ವಲಿ, ಅಬ್ದುಲ್ ವಾಹೀದ್, ಕೆ.ಮನೋಹರ, ಎಂ.ಗೋಪಾಲ, ಪಿ.ಪಾಂಡುರಂಗ, ಬಾಷ, ಹೊಟೇಲ್ ಶೇಖ್‌ಸಾವಲಿ ಭಾಗವಹಿಸಿದ್ದರು.