ಲಿಖಿತ ಒಪ್ಪಂದದಂತೆ ಪೆಲೆಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ಗಳಿಂದ ವಜಾಗೊಳಿಸಲ್ಪಟ್ಟಿದ್ದ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು.
ಸಂಡೂರು: ತಾಲೂಕಿನ ದೋಣಿಮಲೈನಲ್ಲಿರುವ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಪೆಲೆಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ಗಳ ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ೧೩ ದಿನಗಳಿಂದ ಸಂಯುಕ್ತ ಗಣಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿದ್ದರು.
ಪ್ರಾದೇಶಿಕ ಕಾರ್ಮಿಕ ಆಯುಕ್ತ ಬಸವರಾಜ್, ಎನ್‌ಎಂಡಿಸಿ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರ ನಡುವೆ ನಡೆದ ತ್ರಿಪಕ್ಷೀಯ ಸಭೆಯಲ್ಲಿ ಕಾರ್ಮಿಕರ ಯೂನಿಯನ್ ಎತ್ತಿರುವ ಪ್ರಮುಖ ಬೇಡಿಕೆಗಳು ಒಪ್ಪಿತವಾಗಿ, ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು.ಲಿಖಿತ ಒಪ್ಪಂದದಂತೆ ಪೆಲೆಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ಗಳಿಂದ ವಜಾಗೊಳಿಸಲ್ಪಟ್ಟಿದ್ದ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಮಾರ್ಚ್ ಅಂತ್ಯದವೇಳೆಗೆ ಪ್ಲಾಂಟ್‌ಗಳಲ್ಲಿ ಉತ್ಪಾದನೆ ಆರಂಭವಾಗಲಿದೆ. ಎಲ್ಲ ಕಾರ್ಮಿಕರನ್ನು ಕೆಲಸದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ಅಲ್ಲಿವರೆಗೆ ರೊಟೇಷನ್ ಆಧಾರದ ಮೇಲೆ ಹಂತ ಹಂತವಾಗಿ ಕೆಲಸಕ್ಕೆ ತೆಗೆದುಕೊಳ್ಳುವುದು. ಮೊದಲ ಬ್ಯಾಚನ್ನು ಡಿಸೆಂಬರ್ ೨೦-೨೫ರ ಅವಧಿಯಲ್ಲಿ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಲಾಗಿದೆ. ಈ ಲಿಖಿತ ಒಪ್ಪಂದದ ಪ್ರತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಸಂಯುಕ್ತ ಗಣಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪ್ರಮೋದ್ ತಿಳಿಸಿದರು.
ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿದ ಸಂಸದರಾದ ಈ.ತುಕಾರಾಂ, ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರು, ಜಿಲ್ಲಾಡಳಿತ, ಎನ್‌ಎಂಡಿಸಿ ಹಾಗೂ ಪೆಲೆಟ್ ಹಾಗೂ ಜೈ ಅಂಬೆ ಹೊಸ ಕಂಪನಿಯ ಮಾಲೀಕರಿಗೂ ಸಂಯುಕ್ತ ಗಣಿ ಕಾರ್ಮಿಕರ ಸಂಘವು ಧನ್ಯವಾದ ಸಲ್ಲಿಸುತ್ತದೆ ಎಂದು ಡಾ. ಪ್ರಮೋದ್ ತಿಳಿಸಿದರು.ಸಂಧಾನ ಸಭೆಯಲ್ಲಿ ಕಾರ್ಮಿಕ ನೇತೃತ್ವವನ್ನು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ವಹಿಸಿದ್ದರು. ಸಂಯುಕ್ತ ಗಣಿ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎ.ದೇವದಾಸ್, ಪ್ರಧಾನ ಕಾರ್ಯದರ್ಶಿ ಡಾ. ಪ್ರಮೋದ್, ಮುಖಂಡರಾದ ಹುಲಿಗೇಶ್, ಸಂತೋಷ್, ಮಂಜುನಾಥ್, ರಾಜಪ್ಪ, ಬಸವರಾಜ್, ರಾಕೇಶ್ ಉಪಸ್ಥಿತರಿದ್ದರು.
ತ್ರಿಪಕ್ಷೀಯ ಸಭೆಯ ಒಪ್ಪಿಗೆ ಪತ್ರವನ್ನು ಕಾರ್ಮಿಕರ ಸಂಘದ ಮುಖಂಡರು ಜಿಲ್ಲಾಧಿಕಾರಿ ನಾಗೇಂದ್ರಪ್ರಸಾದ್ ಅವರಿಗೆ ಸಲ್ಲಿಸಿದರು.