ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಕರ್ನಾಟಕದಿಂದ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ದೇಶಾದ್ಯಂತ ಒಟ್ಟು 958 ಅಭ್ಯರ್ಥಿಗಳು ಐಎಎಸ್‌, ಐಪಿಎಸ್‌, ಐಆರ್‌ಎಸ್‌ ಸೇರಿ ವಿವಿಧ ಕೇಂದ್ರ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ನಗರದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚಿಕ್ಕೋಡಿ ಮೂಲದ ಕಿರಣ್ ಕಮತೆ (29) ರಾಜ್ಯಕ್ಕೆ ಟಾಪರ್ ಆಗಿದ್ದು, ಅಖಿಲ ಭಾರತ ಮಟ್ಟದಲ್ಲಿ 53ನೇ ರ್‍ಯಾಂಕ್ ಪಡೆದಿದ್ದಾರೆ.

ಉಳಿದಂತೆ ಸಂದೀಪ್ ಬಡಾದ್- 82ನೇ ರ್‍ಯಾಂಕ್, ಸೂರ್ಯ ವಿ.ಕೆ. - 162, ಚಿನ್ಮಯಿ ಪಿ - 310, ಮನೋಜ್ ಜಿ. ಎಸ್ - 389, ಎ. ಮಧು - 436, ವರುಣ್ ಗೌಡ. ಪಿ - 462, ನಿವೇದಿತಾ ಸಿ ಭಾವಿಮನಿ - 469, ವಿಶಾಖಾ ಕದಂ - 504, ಸೂರಜ್ ಕೆ. ಎಲ್. - 525, ಧನಂಜಯ - 554, ಉಲ್ಲಾಸ್ ಎಂ. ಎಸ್. - 556, ಡಾ. ಮುತ್ತೇಶ್ ಗೌಡ - 622, ಸಾಗರ್. ಎ - 641, ಪಾಂಡುರಂಗ. ಎಸ್ - 660, ಚಂದನ್. ವೈ - 661, ಬಸವರಾಜ್ ಜವಳಿ - 664, ಯತೀಶ ಎಂ. ಎ. - 732, ಬಸವರಾಜ್ ಎಂ. ಪಾಟೀಲ್ - 739, ತೌಸಿಫ್ ಉಲ್ಲಾ ಖಾನ್ - 741, ಅನಿರುದ್ಧ ಕಟ್ಟಿಮನಿ - 786, ಚಂದ್ರಶೇಖರ್-880 ಮತ್ತು ನೇಹಾ - 925ನೇ ರ್‍ಯಾಂಕ್ ಪಡೆದಿದ್ದಾರೆ.

5 ತಾಸು ಅಧ್ಯಯನ:


ಐದು ಬಾರಿ ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದ ಕಿರಣ್ ಮುಖ್ಯ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಆದರೆ, 6ನೇ ಬಾರಿಗೆ ಯಶಸ್ಸು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ರಾಜ್ಯಕ್ಕೆ ಟಾಪರ್ ಆಗಿರುವ ಕುರಿತು ಸಂತಸ ಹಂಚಿಕೊಂಡಿರುವ ಕಿರಣ್ ಅವರು, 2023ರಲ್ಲಿ ಕೆಲಸಕ್ಕೆ ಸೇರಿದ್ದೇನೆ. ಕೆಲಸ ಮಾಡುತ್ತಲೇ ದಿನಕ್ಕೆ 5 ತಾಸು ಓದುತ್ತಿದ್ದೆ. 250 ರ್‍ಯಾಂಕ್‌ ಒಳಗೆ ಬರುವ ನಿರೀಕ್ಷೆ ಇತ್ತು. ಆದರೆ, 53ನೇ ರ್‍ಯಾಂಕ್‌ ಬಂದಿದ್ದೇನೆ. ಸಂತಸವಾಗಿದೆ. ತಂದೆ, ತಾಯಿ ಹಾಗೂ ಪತ್ನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.ಐದು ಬಾರಿ ಫೇಲ್‌, ಆರನೇ ಬಾರಿ ರಾಜ್ಯಕ್ಕೆ ಟಾಪರ್‌:

‘ಸೋಲಿನಲ್ಲಿಯೇ ಗೆಲುವು ಕಾಣು’ ಎಂಬಂತೆ ಸತತ ಐದು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಸಿಗದ ಯಶಸ್ಸು, ಆರನೇ ಬಾರಿಗೆ ಅದೃಷ್ಟ ತಂದಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಶುಕ್ರವಾರ ಬಿಡುಗಡೆ ಮಾಡಿದ ಸಿವಿಲ್‌ ಸೇವಾ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಕಿರಣ ಕಮತೆ (29) ಅವರು ರಾಜ್ಯಕ್ಕೆ ಟಾಪರ್‌, ರಾಷ್ಟ್ರಕ್ಕೆ 53ನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.ಮೊದಲ ಮೂರು ಬಾರಿ ಮೇನ್ಸ್‌ ಹಂತದಲ್ಲಿಯೇ ವಿಫಲರಾಗಿದ್ದರು. ಮತ್ತೆರಡು ಬಾರಿ ಮೇನ್ಸ್‌ನಲ್ಲಿ ಯಶಸ್ವಿಯಾದರೂ, ನಿಗದಿತ ಫಲಿತಾಂಶ ಅವರಿಗೆ ತೃಪ್ತಿ ಕೊಡಲಿಲ್ಲ. ಈ ಮಧ್ಯೆ, 2023ರಲ್ಲಿ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ನೇಮಕಗೊಂಡಿದ್ದು, ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ದಿನಕ್ಕೆ ಐದರಿಂದ ಆರು ಗಂಟೆಗಳ ಕಾಲ ಓದಿ ಅವರು ಈ ಸಾಧನೆ ಮಾಡಿದ್ದಾರೆ. ಈ ಬಾರಿ ರಾಜ್ಯಕ್ಕೆ ಟಾಪರ್‌ ಆಗಿ, ದೇಶಕ್ಕೆ 53ನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದಿದ್ದಾರೆ. ಕಿರಣ ಅವರ ತಂದೆ ಸಣ್ಣಪ್ಪ ಕಮತೆ ಅವರು ಹುಕ್ಕೇರಿ ತಾಲೂಕಿನ ನಿಡಸೋಸಿಯ ಹೀರಾ ಶುಗರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ತಾಯಿ ರುಕ್ಮಿಣಿ ಅವರು ಗೃಹಿಣಿ.

ಕೋಟ್‌....ಇದು ಕೊನೆ ಅವಕಾಶವಾಗಿತ್ತುಕೆಲಸ ಮಾಡುತ್ತಲೇ ದಿನಕ್ಕೆ ಐದರಿಂದ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಇದು ನನ್ನ ಕೊನೆಯ ಅವಕಾಶವಾಗಿತ್ತು. ಈ ಬಾರಿ ಯಶಸ್ಸು ಸಾಧಿಸಲೇ ಬೇಕು ಎಂಬ ದೃಢನಿಶ್ಚಯದೊಂದಿಗೆ ಪರೀಕ್ಷೆ ಬರೆದಿದ್ದೆ. 250ರ ಒಳಗೆ ರ್‍ಯಾಂಕ್‌ ಬರುವ ನಿರೀಕ್ಷೆ ಇತ್ತು. ಈಗ ದೇಶಕ್ಕೆ 53ನೇ ಸ್ಥಾನ ಹಾಗೂ ರಾಜ್ಯಕ್ಕೆ ಮೊದಲ ಸ್ಥಾನ ಸಿಕ್ಕಿರುವುದು ಬಹಳ ಸಂತೋಷ ತಂದಿದೆ. - ಕಿರಣ ಕಮತೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 53ನೇ ರ್‍ಯಾಂಕ್‌.