ಹುಬ್ಬಳ್ಳಿ:
ನಗರದ ಬಾಲಾಜಿ ಆಸ್ಪತ್ರೆಗೆ ಮತ್ತೊಂದು ಗರಿ ಮೂಡಿದ್ದು, ಈಚೆಗೆ ವಿಜಯಪುರದಲ್ಲಿ ಜರುಗಿದ ಕರ್ನಾಟಕ ನರವಿಜ್ಞಾನ ಅಕಾಡೆಮಿಯ ರಾಜ್ಯಮಟ್ಟದ 15ನೇ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಕ್ಕೆ 2ನೇ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ಲಭಿಸಿದೆ.ಕರ್ನಾಟಕ ನರವಿಜ್ಞಾನ ಅಕಾಡೆಮಿ (ಕೆಎನ್‌ಎ) ವತಿಯಿಂದ ನರವಿಜ್ಞಾನ ಮತ್ತು ನರರೋಗ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಇತ್ತೀಚಿನ ವೈದ್ಯಕೀಯ ಸಂಶೋಧನೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಲು ಹಮ್ಮಿಕೊಳ್ಳುವ ರಾಜ್ಯಮಟ್ಟದ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಮ್ಮೇಳನದಲ್ಲಿ ಆಸ್ಪತ್ರೆ ಚೇರ್‌ಮನ್ ಹಾಗೂ ನರರೋಗ ತಜ್ಞ ಡಾ. ಕ್ರಾಂತಿಕಿರಣ ಮಾರ್ಗದರ್ಶನದಲ್ಲಿ ಆಸ್ಪತ್ರೆಯ ವೈದ್ಯ ಡಾ. ಆದಿತ್ಯ ಬಿಸ್ವಾಸ್ ಮಂಡಿಸಿದ "ನ್ಯೂರೊ ನೇವಿಗೆಷನ್- ಗೈಡೆಡ್ ಪರ್ಕ್ಯುಟೇನಿಯಸ್ ರೇಡಿಯೋಫ್ರೀಕ್ವೆನ್ಸಿ ಥರ್ಮೋ ಕೊಆಗ್ಯುಲೇಷನ್ (ಆರ್‌ಎಫ್‌ಟಿ) ಆಫ್ ದಿ ಗ್ಯಾಸ್ಸೇರಿಯನ್ ಗ್ಯಾಂಗ್ಲಿಯನ್ ಫಾರ್ ಟ್ರೈಜಿಮಿನಲ್ ನ್ಯೂರಾಲ್ಜಿಯಾ " ವಿಷಯದ ಕುರಿತ ವಿಶಿಷ್ಠ ಸಂಶೋಧನಾ ಪ್ರಬಂಧಕ್ಕೆ ಈ ಪ್ರಶಸ್ತಿ ದೊರಕಿದೆ.
ಈ ಚಿಕಿತ್ಸಾ ವಿಧಾನವನ್ನು ಆಸ್ಪತ್ರೆ ಚೇರ್‌ಮನ್ ಡಾ. ಕ್ರಾಂತಿಕಿರಣ್ ಮಾರ್ಗದರ್ಶನದಲ್ಲಿ ಬಾಲಾಜಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿದ್ದು, ಇಂತಹ ನವೀನ ತಂತ್ರಜ್ಞಾನದ ಉತ್ಕೃಷ್ಟ ಚಿಕಿತ್ಸೆ ನೀಡುವ ಭಾರತದ ಕೆಲವೇ ಕೆಲವು ಆಸ್ಪತ್ರೆಗಳ ಸಾಲಿನಲ್ಲಿ ಬಾಲಾಜಿ ಆಸ್ಪತ್ರೆಯು ಒಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.