ಹಾನಗಲ್ಲ: ಸಂಪ್ರದಾಯಕ್ಕೆ ಒತ್ತುಕೊಟ್ಟು ಮನೆಯಿಂದ ಹೊರಗೆ ದುಡಿಯುವ ವೃತ್ತಿಗೆ ಕಳುಹಿಸದೇ ಇರುವ ಮಹಿಳೆಯರು ಆರ್ಥಿಕ ಅಭಿವೃದ್ದಿಗೆ ಪರ್ಯಾಯ ದಾರಿ ಕಂಡುಕೊಳ್ಳಬೇಕು ಎಂದು ಫಾದರ್ ಜೈಸನ್ ನುಡಿದರು.

ಲೊಯೋಲ ವಿಕಾಸ ಕೇಂದ್ರ ಹಾಗೂ ಸಮಗ್ರ ಸುಸ್ಥಿರ ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜನೆ ಮಾಡಲಾದ ಕೌಶಲ್ಯಾಭಿವೃದ್ದಿ ತರಬೇತಿಯಲ್ಲಿ ಮಾತನಾಡಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಲು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಇದರಿಂದ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಸ್ವ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯಶೋಧಾ ದ್ಯಾವಪ್ಪನವರ ಮಾತನಾಡಿ, ಕೌಶಲ್ಯವೇ ವ್ಯಕ್ತಿಯ ಯಶಸ್ಸಿನ ಮೂಲ ಆಧಾರವಾಗಿದೆ. ಇಂದಿನ ಯುಗದಲ್ಲಿ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಕೌಶಲ್ಯಗಳಿಗೂ ಹೆಚ್ಚಿನ ಮಹತ್ವವಿದೆ. ಮಹಿಳೆಯರು ತಮ್ಮ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು. ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ಉದ್ಯೋಗ ಮತ್ತು ಸ್ವಉದ್ಯೋಗದ ಅನೇಕ ಅವಕಾಶಗಳು ದೊರೆಯುತ್ತವೆ. ಸರಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಹೊಂದಿ ಅವುಗಳನ್ನು ಬಳಸಿಕೊಳ್ಳಬೇಕು. ಒಬ್ಬ ಉದ್ಯಮಿಯಾಗಿ ಹೊರಹೊಮ್ಮಬೇಕಾದರೆ ಮಾತನಾಡಡುವ ಶೈಲಿ ಕಲಿಯಬೇಕು. ಕೌಶಲ್ಯಗಳನ್ನು ಕಲಿಯುವ ಮೂಲಕ ತಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಪ್ರಾರಂಭಿಸಲು ಪ್ರೇರಣೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ 83 ಮಹಿಳೆಯರು ಭಾಗವಹಿಸಿದ್ದರು. ಹೊಲಿಗೆ ತರಬೇತಿಯ ಶಿಕ್ಷಕಿಯರು, ಮಹಿಳೆಯರು, ಯುವತಿಯರು ಉಪಸ್ಥಿತರಿದ್ದರು. ಶೋಭಾ ಗರಡೇರ ನಿರೂಪಿಸಿದರು. ರಮೇಶ ಬಾರ್ಕಿ ಸ್ವಾಗತಿಸಿದರು. ಎಸ್ ಬಿ. ಜಯಮ್ಮ ವಂದಿಸಿದರು.