ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ
ರಾಷ್ಟ್ರವ್ಯಾಪಿ ಏ.1ರಿಂದ ಟೋಲ್ ದರ ಹೆಚ್ಚಳದ ವಿಚಾರ ಚರ್ಚೆಯಾಗುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ಟೋಲ್ ದರದ ಜೊತೆಯಲ್ಲಿ ಟೋಲ್ ಫ್ಲಾಝಾ ಗಳ ಸಂಖ್ಯೆಯೇ ಎರಡುಪಟ್ಟು ಹೆಚ್ಚಾಗುವ ಭೀತಿ ಆವರಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿರುವ ಮೂರು ಟೋಲ್ ಫ್ಲಾಜಾ ಗಳ ಕುರಿತೇ ನಾಗರೀಕರಿಗೆ ಅಸಮಾಧಾನಗಳಿರುವಾಗಲೇ ಹೊಸ ಮೂರು ಟೋಲ್ ಫ್ಲಾಝಾ ಗಳು ನಿರ್ಮಾಣ ಹಂತದಲ್ಲಿರುವುದು ಹೋರಾಟಗಾರರನ್ನು ಕೆಣಕಿದಂತಾಗಿದೆ.ಪ್ರಸ್ತುತ ಜಿಲ್ಲೆಯಲ್ಲಿ ಬ್ರಹ್ಮರಕೂಟ್ಲು (ರಾ.ಹೆ. 75), ತಲಪಾಡಿ (ರಾ.ಹೆ. 66), ಮತ್ತು ಹೆಜಮಾಡಿ (ರಾ.ಹೆ. 66) ಯಲ್ಲಿ ಟೋಲ್ ಫ್ಲಾಝಾ ಗಳಿದ್ದು, ಇದೀಗ ಹೊಸದಾಗಿ ಗಂಜಿಮಠ, ವಳಾಲು ಮತ್ತು ಪಣಪಿಲ ಟೋಲ್‌ಗಳು ಪ್ರಸ್ತಾಪದ ಜೊತೆಗೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಹೊಸ ಟೋಲ್ ನಿರ್ಮಾಣ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳು ಸಮರ್ಪಕವಾಗಿ ಪಾಲನೆಯಾಗಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ‘60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದೇ ಟೋಲ್ ಪ್ಲಾಜಾ ಇರಬೇಕು’ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಜಿಲ್ಲೆಯಲ್ಲಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದ್ದು, 25ರಿಂದ 40ಕಿ.ಮೀ. ಆಸುಪಾಸಿನಲ್ಲಿ ಟೋಲ್ ಫ್ಲಾಝಾಗಳು ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿದೆ.ಹೊಸದಾಗಿ ಪ್ರಸ್ತಾಪವಾಗಿರುವ ಟೋಲ್‌ಗಳಲ್ಲಿ ಗಂಜಿಮಠ (ರಾ.ಹೆ. 169) ಮಂಗಳೂರಿನಿಂದ ಕೇವಲ 17 ಕಿಲೋಮೀಟರ್ ದೂರದಲ್ಲಿದೆ. ವಳಾಲು (ರಾ.ಹೆ. 75) ಬ್ರಹ್ಮರಕೂಟ್ಲು ಟೋಲ್‌ನಿಂದ ಸುಮಾರು 35 ಕಿಲೋಮೀಟರ್ ಅಂತರದಲ್ಲಿದೆ. ಬಿಸಿ ರೋಡ್ – ಚಾರ್ಮಾಡಿ ರಸ್ತೆಯ ಪಣಕಜೆ ಭೂ ಸಾರಿಗೆ ಇಲಾಖೆಗೆ ಒಳಪಟ್ಟಿದೆ, ಇಲ್ಲಿ ದ್ವಿಪಥ ರಸ್ತೆಗೆ ಟೋಲ್ ನ್ಯಾಯವೇ ಎಂಬ ಪ್ರಶ್ನೆಗಳು ಕೇಳಿಬಂದಿದೆ.ಹೋರಾಟ ತೀವ್ರಗೊಳ್ಳುವ ಸೂಚನೆ..: ಸುರತ್ಕಲ್ ಟೋಲ್ ವಿರುದ್ಧದ ಯಶಸ್ವೀ ಹೋರಾಟದ ಬಳಿಕ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ಕುರಿತಾಗಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಒಂದಾಗಿರುವ ಟೋಲ್ ವಿರೋಧಿ ಹೋರಾಟ ಸಮಿತಿ, ಬೇಕಾಬಿಟ್ಟಿ ಟೋಲ್ ಗೇಟ್ ನಿರ್ಮಾಣ ಮಾಡಿದಲ್ಲಿ ತೀವ್ರ ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರುದ್ಧ ಈಗಾಗಲೇ ಮೊದಲ ಹಂತದ ಪ್ರತಿಭಟನೆ ನಡೆಸಿರುವ ಹೋರಾಟ ಸಮಿತಿ, ಎರಡನೇ ಹಂತದಲ್ಲಿ ಪಾದಯಾತ್ರೆ ನಡೆಸುವ ಸಂಕಲ್ಪ ತೊಟ್ಟಿದೆ.
ಈ ಕುರಿತಾಗಿ ನಿರ್ಮಾಣಹಂತದ ಟೋಲ್ ಗೇಟ್ ಸ್ಥಳಕ್ಕೆ ಭೇಟಿ ನೀಡಿದ ಹೋರಾಟ ಸಮಿತಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ನ್ಯಾಯೋಚಿತ ಬೆಂಬಲಕ್ಕೆ ಮನವಿ ಮಾಡಿದೆ.ದ.ಕ.ಜಿಲ್ಲೆಯ ಜನತೆ ಟೋಲ್ ಗೇಟ್ ಎನ್ನುವ ಚಕ್ರವ್ಯೂಹದ ಒಳಗೆ ಸಿಲುಕಿದ ಸ್ಥಿತಿಯಲ್ಲಿದ್ದಾರೆ, ಇದರ ವಿರುದ್ಧ ಹೋರಾಟ ಅನಿವಾರ್ಯ-ಮುನೀರ್ ಕಾಟಿಪಳ್ಳಸಂಚಾಲಕರು, ಸುರತ್ಕಲ್ ಟೋಲ್ ಗೇಟ್ ವಿರೋಧಿ ಸಮಿತಿಬ್ರಹ್ಮರಕೂಟ್ಲು ಟೋಲ್ ಗೇಟ್ ಸೇರಿದಂತೆ ಕಾನೂನು ಬಾಹಿರವಾಗಿ ಕಾರ್ಯಾಚರಿಸುವ ಎಲ್ಲಾ ಟೋಲ್ ಗೇಟ್ ಗಳ ನಿರ್ಮಾಣಕ್ಕೆ ನಮ್ಮವಿರೋಧವಿದೆ.-ಬಿ.ರಮಾನಾಥ ರೈ, ಗೌರವಾಧ್ಯಕ್ಷರು, ಬ್ರಹ್ಮರಕೂಟ್ಲು ಟೋಲ್ ಗೇಟ್ ವಿರೋಧಿ ಸಮಿತಿ