ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿಯ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಇವರಿಬ್ಬರು ಜೋಡೆತ್ತಿನ ರೀತಿ ಅಕ್ರಮದ ಕೆಲಸ ಮಾಡುವ ಮೂಲಕ ಬಾಗಲಕೋಟೆ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಕಿಡಿಕಾರಿದರು.ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2012ರಲ್ಲಿ ಗೋವಿಂದ ಕಾರಜೋಳ ಅವರು ತಮ್ಮ ಮಕ್ಕಳಾದ ಗೋಪಾಲ ಕಾರಜೋಳ, ಉಮೇಶ ಕಾರಜೋಳ, ಅರುಣ್ ಕಾರಜೋಳ ಹೆಸರಿನಲ್ಲಿ ಕಡಿಮೆ ಮೊತ್ತಕ್ಕೆ ಸುಮಾರು 30 ಎಕರೆ ಜಮೀನು ಖರೀದಿಸಿ 2013ರಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ಬಿಟಿಡಿಎಗೆ ಪತ್ರ ಬರೆದಿದ್ದಾರೆ. ಬಿಟಿಡಿಎಗೆ ಜಮೀನು ಸ್ವಾಧೀನ ಆಗುತ್ತೆ, ಹೆಚ್ಚಿನ ಪರಿಹಾರ ಸಿಗುತ್ತೆ ಅನ್ನೋ ಕಾರಣಕ್ಕೆ ಈ ರೀತಿ ಜಮೀನು ಖರೀದಿಸಿ, ಮಾರಾಟ ಮಾಡುವ ಅಕ್ರಮ ಎಸಗಿದ್ದಾರೆ. ಈ ಮೂಲಕ ಸರಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಎಚ್.ಕೆ. ಪಾಟೀಲ ನೀರಾವರಿ ಸಚಿವರಾಗಿದ್ದಾಗ ₹630 ಕೋಟಿ ನೀರಾವರಿ ಅನುದಾನ ತಂದಿದ್ವಿ. ಬಾಗಲಕೋಟೆ ಜಿಲ್ಲೆ ಅಭಿವೃದ್ಧಿ ಮಾಡಬೇಕು ಎಂದು ಕ್ಯಾಬಿನೆಟ್ ಸಬ್ ಕಮಿಟಿಯನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ವಿ. ಇದು ನಮ ಕಾಂಗ್ರೆಸ್ ಬದ್ಧತೆ. ಬಿಜೆಪಿಯವರು ಮುಳುಗಡೆ ಸಂತ್ರಸ್ತರ ಜಮೀನುಗಳಿಗೆ ಪರಿಹಾರ ಕೊಡುವ ನಾಟಕ ಮಾಡಿದರು. ಬಿಜೆಪಿಯರು ₹24-25 ಲಕ್ಷ ಫಿಕ್ಸ್ ಮಾಡಿ ಮೂರು ಚೆಕ್ ಕೊಡೋ ರೀತಿ ನಾಟಕ ಮಾಡಿದರು. ಆದರೆ ನಾವು ಆ ರೀತಿ ಮಾಡಿಲ್ಲ. ₹40-₹30 ಲಕ್ಷ ಪರಿಹಾರ ನಿಗದಿ ಮಾಡುವ ಮೂಲಕ ಚೆಕ್ ಹಸ್ತಾಂತರಿಸುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡೋದು ನಾವು, ಬಿಜೆಪಿಯವರು ಬರೀ ಟೀಕೆ ಮಾಡಿಕೊಂಡು ಓಡಾಡೋದು ಅವರ ಕೆಲಸ ಎಂದು ಆರೋಪಿಸಿದರು.ಬ್ರಿಟಿಷ್‌ರಿಂದ 47ರಲ್ಲೇ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಬಾಗಲಕೋಟೆಯಲ್ಲಿ ಇನ್ನೂ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದಾರೆ. ವೋಟ್ ಕೇಳೋಕೆ ಹೋದವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಕಾಲೇಜಿನಲ್ಲಿ ಧ್ವನಿ ಎತ್ತುವವರಿಗೆ ಹಿಂಸೆ ನೀಡೋದು, ಪ್ರಮೋಷನ್ ಕಟ್ ಮಾಡಿ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆ, ವಾಣಿಜ್ಯ ವ್ಯವಹಾರಗಳು, ಪ್ರವಾಸೋದ್ಯಮ ಬೆಳೆಯಲು ಸಾಮರಸ್ಯವಿದ್ದರೆ ಮಾತ್ರ ಸಾಧ್ಯ. ಆದರೆ ಬಿಜೆಪಿ ಅಧಿಕಾರ ಲಾಲಸೆಯಿಂದ ಧರ್ಮ ಧರ್ಮಗಳ ನಡುವೆ ಘರ್ಷಣೆ, ಹಿಂಸಾತ್ಮಕ ಕೃತ್ಯಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಅಭಿವೃದ್ಧಿಗೆ ತೊಂದರೆ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.-----------
ಬಿಟಿಡಿಎಯಲ್ಲಿ ವೀರಣ್ಣ ಚರಂತಿಮಠ ಸಾಕಷ್ಟು ಅಕ್ರಮ ಎಸಗಿದ್ದಾರೆ. ಅವರ ಅಕ್ರಮಗಳಿಗೆ ಕಾನೂನು ಬಾಹಿರ ಕೆಲಸಗಳಿಗೆ ಚೀಫ್ ಎಂಜಿನಿಯರ್ ಅಮಾನತ್ತಾಗಿರೋದೇ ಸಾಕ್ಷಿ. ಇದು ಅವರು ಮಾಡಿರೋ ಭ್ರಷ್ಟಾಚಾರ ಅಲ್ವೇನು ಎಂದು ಪ್ರಶ್ನಿಸಿದರು. ಬಾಗಲಕೋಟೆಗೆ ಮಾರಕವಾದ ಕೆಲಸ ಮಾಡೋರು, ಸರಕಾರದ ಹಣ ಲೂಟಿ ಮಾಡೋರು ಅವರಾದರೆ ಅಭಿವೃದ್ಧಿ ಕೆಲಸ ಮಾಡಿರೋದು ನಾವು.
- ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವ