ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗ್ಯಾರಂಟಿ, ಗ್ಯಾರಂಟಿ ಅಂತೇಳಿ ರಾಜ್ಯದಲ್ಲಿ ದಾಖಲೆಯ ಪದ ಬಳಕೆ ಆಗಿದೆ. ಕಾಂಗ್ರೆಸ್ಸಿಗರು ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಪ್ರಮುಖ ಚರ್ಚೆ ಮಾಡ್ತಾರೆ, ಗ್ಯಾರಂಟಿ ಕಾರ್ಯಕ್ರಮ ಜನರ ಹೃದಯದಲ್ಲಿ ಶಕ್ತಿ ಕೊಟ್ಟಿದ್ರೆ, ನೀವು ಬಾಗಲಕೋಟೆಗೆ ಬಂದು ಐದು ದಿನ ಪ್ರಚಾರ ಮಾಡುವ ಅವಶ್ಯಕತೆ ಇದೆಯಾ? ಎಂದು ಜೆಡಿಎಸ್ ಮುಖಂಡ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ಕಾರ್ಯಕ್ರಮ ಪರಿಣಾಮಕಾರಿ ಆಗಿದ್ರೆ, ಬಡವರಿಗೆ ಆರ್ಥಿಕವಾಗಿ ಶಕ್ತಿ ದೊರಕಿದ್ರೆ ಐದು ದಿನ ಪ್ರಚಾರ ಮಾಡುವ ಅವಶ್ಯಕತೆ ಇರಲಿಲ್ಲ. ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ರೆ, ಪ್ರತಿ ಕುಟುಂಬದ ತಲಾ ಆದಾಯ ಅಷ್ಟೊಂದು ಪ್ರಮಾಣದಲ್ಲಿದ್ದರೆ ಈ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಏನಿದೆ? ನಿಮ್ಮಲ್ಲಿಯೇ ದ್ವಂದ್ವ ನಿಲುವುಗಳಿವೆ ಎಂದು ಟೀಕಿಸಿದರು.

ಸರ್ಕಾರ ಗ್ಯಾರಂಟಿಗೆ ದುಡ್ಡು ಖರ್ಚು ಮಾಡ್ತಿಲ್ಲ ಎಂದು ನಾನು ಹೇಳಿಲ್ಲ, ಕೇಂದ್ರವೂ ಸಹ ಸಾಲ ಮಾಡಿದೆ, ಇವರು ಸಹ ಸಾಲ ಮಾಡಿದ್ದಾರೆ, ಖಜಾನೆ ತುಂಬಿಸುತ್ತೇನೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಗ್ಯಾರಂಟಿ ಖರ್ಚಿಗಿಂತ ಸಾಲ ಹೆಚ್ಚು ಮಾಡಿದ್ದಾರೆ. ಆದರೆ ನಾನು ಮುಡಾ ಹಗರಣದ ಬಗ್ಗೆ ಮಾತನಾಡಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹88 ಕೋಟಿ ದುರ್ಬಳಕೆಯನ್ನು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡರು. ರಾಜ್ಯದ ಆಡಳಿತದಲ್ಲಿ ಹಲವಾರು ವೈಫಲ್ಯಗಳಿವೆ, ಸಿಎಂಗೆ ನೇರವಾಗಿ ಕೇಳ್ತಿನಿ ಎಂದರು.

ಯುಕೆಪಿಗೆ ₹3 ಸಾವಿರ ಕೋಟಿ ಏತಕ್ಕೆ ಸಾಲುತ್ತೆ:ರಾಜ್ಯ ಸರ್ಕಾರ ಯುಕೆಪಿ ಯೊಜನೆ ಅನುಷ್ಠಾನಕ್ಕೆ ತರಲು ಜವಾಬ್ದಾರಿ ಮೆರೆಯುತ್ತಿದೆ? 130 ಟಿಎಂಸಿ ನೀರು ರೈತರ ಹೊಲಕ್ಕೆ ಹರಿಸಲು ನಿಮ್ಮ ಕೊಡುಗೆ ಏನು? ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಮಾಡಿಸಿ ಅಂತ ಹೇಳ್ತೀರಿ, 516 ಮೀಟರ್ ಗೆ ಗೇಟ್ ನಿಲ್ಲಿಸಿಕೊಂಡು ಕೂತಿದ್ದೀರಿ, ಭೂಸ್ವಾಧೀನಕ್ಕೆ ದುಡ್ಡಿನ ಕೊರತೆ ಕಾಡ್ತಿದೆ, ನೀವು ಬಜೆಟ್‌ನಲ್ಲಿ ತೆಗೆದಿಸಿರುವ ₹3 ಸಾವಿರ ಕೋಟಿ ಹಣ ಯಾವುದಕ್ಕೆ ಸಾಲುತ್ತೆ, ನಾನು ಅತ್ಯಂತ ಕಡಿಮೆ ಅವಧಿಯಲ್ಲಿ ಸಿಎಂ ಆಗಿದ್ದೆ. ಆಗ ನೀರಾವರಿ ಇಲಾಖೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಜವಾಬ್ದಾರಿ ಕೊಟ್ಟಿದ್ದೆ, ಆಗ ನಮ್ಮ ಇಲಾಖೆಯಲ್ಲಿ ತಲೆ ಹಾಕಬೇಡಿ ಎಂದು ನನಗೆ ಹೇಳಿದ್ದರು ಎಂದು ನೆನಪಿದರು.


ಹೊಟ್ಟೆಕಿಚ್ಚು ನಮಗೇಕೆ ನಿಮ್ಮವರಿಗೆ ಹೊಟ್ಟೆ ನೋವಿದೆ:ಹಿಂದುಳಿದ ನಾಯಕ ಸಿಎಂ ಆಗಿದ್ದಕ್ಕೆ ವಿಪಕ್ಷಗಳಿಗೆ ಹೊಟ್ಟೆನೋವು ಎಂದಿರುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಸಿಎಂ ಹಿಂದುಳಿದ ನಾಯಕ ಎಂದು ಹೇಳುತ್ತಿದ್ದಾರೆ, ಅವರ ಬೆಳವಣಿಗೆ ಹಿಂದೆ ಯಾರ ಶ್ರಮ ಇದೆ, ಅಸೂಹೆ ಯಾಕೆ ಪಡಬೇಕು, ಹಿಂದೆಯೂ 5 ವರ್ಷ ಸಿಎಂ ಆಗಿದ್ದರು, ಈಗ ನಮಗೇನು ಹೊಟ್ಟೆಕಿಚ್ಚಿಲ್ಲ, ಅವರ ಪಕ್ಷದವರಿಗೆ ಹೊಟ್ಟೆ ನೋವಿದೆ, ಅವರೇ ನೋಡ್ಕೋಬೇಕು, 2013ರಲ್ಲಿ ಚುನಾವಣೆ ರಾಜಕೀಯ ನಿವೃತ್ತಿ ಮಾತನಾಡಿದ್ದರು, ಈಗ ಕೊನೆಯುಸಿರು ಇರೋವರೆಗೆ ಅಂತಿದ್ದಾರೆ ಎಂದು ಲೇವಡಿ ಮಾಡಿದರು.ಬಾಗಲಕೋಟೆ ದಾವಣಗೆರೆ ವಿಷಯ ಗೊತ್ತಾಗಿದೆ. ರಾಜ್ಯದ ಸಿಎಂ ಮತ್ತು ಸಚಿವರು ಬೀಡು ಬಿಟ್ಟಿದ್ದಾರೆ. ಸಂಪೂರ್ಣ ವಿಧಾನಸೌಧವೇ ಬಿಕೋ ಎನ್ನುತ್ತಿವೆ. ಬಾದಾಮಿ ಗೆದ್ದಾಗ ಬಾದಾಮಿ ದತ್ತು ಪಡೀತಿನಿ, ಪೂರ್ಣ ಅಭಿವೃದ್ಧಿ ಮಾಡ್ತೀನಿ ಅಂದಿದ್ರಿ, ನೀವು ಎಷ್ಟು ಅಭಿವೃದ್ಧಿ ಮಾಡಿದ್ದೀರಿ, ಬಾದಾಮಿ ಜನರಿಗೆ ಏನು ಮಾಡಿದ್ರಿ, ಈ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನಗೆ ಎಷ್ಟು ಹಣ ಕೊಟ್ಟಿದೆ ಹೇಳಬೇಕು, ಕೇಂದ್ರದಿಂದ ಗೆಜೆಟ್ ಆಗಬೇಕು ಅಂತಾರೆ. ನಿಮಗೆ ಜನ ಸ್ವತಂತ್ರ ಕೊಟ್ಟಿದ್ದಾರೆ ಎಂದು ಹೇಳಿದರು.

ಕೃತಜ್ಞತೆಯ ಸೌಜನ್ಯ ಬೇಡವೇ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇನು ಸಮಸ್ಯೆ ಆಗುತ್ತಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸರಿಯಾಗಿ ಪೂರೈಕೆ ಮಾಡ್ತಿಲ್ಲ ಎಂಬ ಆರೋಪ ಮಾಡ್ತೀರಿ. ಕೇಂದ್ರ ಸರ್ಕಾರದಲ್ಲಿ ಬುದ್ಧಿವಂತರಿಲ್ಲ, ನೀವು ಬುದ್ಧಿವಂತರು ನೀವೇ ಸಲಹೆ ಕೊಡಿ, ಕಷ್ಟದ ಪರಿಸ್ಥಿತಿಯಲ್ಲೂ ನಿರ್ವಹ ಮಾಡುತ್ತಿದ್ದರೂ ಸೌಜನ್ಯ ಬೇಡವೆ ನಿಮಗೆ? ಸದೃಢವಾಗಿ ಖಜಾನೆ ನಿರ್ವಹಣೆ ಮಾಡುತ್ತಿದ್ದೀರಿ, ದಿನ ಕಷ್ಟ ಪಡ್ತಿರುವ ಕುಟುಂಬಗಳಿಗೆ ನಿಮ್ಮ ಸಹಕಾರ ಏನು? ಎಂದು ಪ್ರಶ್ನಿಸಿದರು.

ಸರ್ಕಾರಿ ಮೆಡಿಕಲ್ ಕಾಲೇಜು ಕೊಟ್ಟಿದ್ದಾರಂತೆ, ಮೆಡಿಕಲ್ ಕಾಲೇಜು ಬಿಲ್ಡಿಂಗ್ ಕಟ್ಟುತ್ತೀರಿ ಡಾಕ್ಟರ್ ಕೊಡ್ತೀರಾ, ಸಿಬ್ಬಂದಿ ಕೊಡ್ತೀರಾ? ನೀವು ಸಿಎಂ ಆದ್ಮೇಲೆ ಎಷ್ಟು ನೇಮಕಾತಿ ಮಾಡಿದ್ದೀರಿ? ಎಂದು ಪ್ರಶ್ನಿಸಿದ ಮಾಜಿ ಸಿಎಂ, ಎರಡು ಚುನಾವಣೆ ಫಲಿತಾಂಶದಿಂದ ಯಾವುದೇ ಸ್ಫೋಟ ಆಗಲ್ಲ, ಜನಪರ ಸರ್ಕಾರ ಇದಲ್ಲ, ಜನರ ಬಗ್ಗೆ ಯಾವುದೇ ಭಯ, ಭಕ್ತಿ ಇಲ್ಲದೇ ದುರಾಡಳಿತದಿಂದ ನಡೆಯುತ್ತಿರುವ ಸರ್ಕಾರ ಇದು. 2028ಕ್ಕೆ ನೀವೇ ಬನ್ನಿ ನಮಗೇನು ಅಸೂಯೆ ಇಲ್ಲ, ಭ್ರಷ್ಟಾಚಾರ ಸರ್ಕಾರ ವನ್ನು ಎಚ್ಚರಿಸಲು ಈ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಎಚ್ಡಿಕೆ ಮನವಿ ಮಾಡಿದರು.

ಯುಕೆಪಿ ಯೋಜನೆ ಗೆಜೆಟ್ ನೋಟಿಫಿಕೇಶನ್ ಯಾಕಾಗ್ತಿಲ್ಲ ಎಂಬ ಪ್ರಶ್ನೆಗೆ ಇಲ್ಲಿಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಜಗಳ ಮಾಡದೆ ಕೇಂದ್ರ ಸರ್ಕಾರ ಜೊತೆಗೆ ಭೇಟಿ ಮಾಡಿ ಚರ್ಚಿಸಿ ಪರಿಹರಿಸುವ ಅಗತ್ಯತೆ ಇದೆ. ಯೋಜನೆ ಜಾರಿಗೆ ಕೆಲವು ಕಾನೂನು ತೊಡಕುಗಳಿವೆ. ಆ ಕಾನೂನು ತೊಡಕು ನಿವಾರಿಸಬೇಕಿದೆ, ಪ್ರತಿನಿತ್ಯ ಮೋದಿ ಬೈದು ಹೋದ್ರೆ ಯಾರೂ ಕೂಡ ಚರ್ಚೆಗೆ ಬರಲ್ಲ, ಪಕ್ಕದ ಆಂಧ್ರಪ್ರದೇಶದ ಜನ ಜಾಣರಿದ್ದಾರೆ, ಸೂಕ್ಷ್ಮವಾಗಿ ನಿಮಗೆ ಹಿಂಟ್ ಕೊಟ್ಟಿದ್ದೇನೆ ಎಂದು ಪರೋಕ್ಷವಾಗಿ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ಕೊಡುವುದು ಪರಿಹಾರ ಎಂದು ಕುಮಾರಸ್ವಾಮಿ ಹೇಳಿದರು. ಎತ್ತಿನ ಹೊಳೆ ಯೋಜನೆಗೆ ಅನುಮತಿ ಕೊಡ್ತಿಲ್ಲ ಎಂಬ ಪ್ರಶ್ನೆಗೆ ಸುಪ್ರಿಂ ಕೋರ್ಟಿನಲ್ಲಿ ಪ್ರಕರಣ ಇದೆ. ತಮಿಳುನಾಡಿನಲ್ಲಿ ನಿಮ್ಮದೇ ಸರ್ಕಾರ ಇದೆ, ಅಕ್ಕ ಪಕ್ಕದ ರಾಜ್ಯಗಳ ಜೊತೆಗೆ ಸಮನ್ವಯ ಸಾಧಿಸುವುದು ಪರಿಹಾರ ಎಂದುತಿಳಿಸಿದರು.