- 150 ಬಸ್‌ಗಳ ವ್ಯವಸ್ಥೆ: ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನು ಪ್ರಾರಂಭಿಸಿದ್ದ, ಈ ನಾಡು ಕಂಡ ಅಪ್ರತಿಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳು ಕಳೆದಿವೆ. ಈ ಸವಿನೆನಪಿಗಾಗಿ ರಾಜ್ಯದಲ್ಲಿರುವ ಯಡಿಯೂರಪ್ಪನವರ ಅಭಿಮಾನಿಗಳು ಚಿತ್ರದುರ್ಗದಲ್ಲಿ ಮೇ 9ರಂದು ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಚನ್ನಗಿರಿ ಕ್ಷೇತ್ರದಿಂದ ಕಾರ್ಯಕ್ರಮಕ್ಕೆ 30 ಸಾವಿರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಮಂಗಳವಾರ ಸಂಜೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭಿಮಾನೋತ್ಸವದಲ್ಲಿ ಭಾಗವಹಿಸಲು ನಡೆಸಿದ ಕಾರ್ಯಕರ್ತರು, ಅಭಿಮಾನಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 2008ರಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಗೆದ್ದು ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಮತ್ತು ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಜೋಡಿ ಚನ್ನಗಿರಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನೇ ಪ್ರಾರಂಭಿಸಿದೆ. ಆ ಸಂದರ್ಭದಲ್ಲಿ ಆದ ಕೆಲಸಗಳನ್ನು ಕ್ಷೇತ್ರದ ಪ್ರತಿಯೊಬ್ಬರಿಗೂ ತಿಳಿಸಿ, ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.
ಮುಂಬರುವ ಮೇ 4ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಈ ಫಲಿತಾಂಶದ ನಂತರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಲಿದೆ. ಯಾವ ಸಂದರ್ಭದಲ್ಲಿಯಾದರೂ ಚುನಾವಣೆ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಕಾರ್ಯಕರ್ತರು ಸನ್ನದ್ಧರಾಗಿ ಇರಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ ಎಂದರು.
ಸ್ಥಳೀಯ ಆಡಳಿತದಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಿ.ಪಂ, ತಾ.ಪಂ, ಗ್ರಾ.ಪಂ. ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಮುಂದಾಗುತ್ತಿಲ್ಲ. ಇನ್ನು ಮುಂದೆ ಯಾವುದೇ ಚುನಾವಣೆಗಳು ಬಂದರೂ ಬಿಜೆಪಿಯೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ 150 ಬಸ್‌ಗಳ ವ್ಯವಸ್ಥೆ ಮಾಡಲಿದ್ದೇವೆ. ಪಕ್ಷದ ಮುಖಂಡರು ಅವರವರ ಸ್ವಂತ ವಾಹನದಲ್ಲಿ ಬರಲಿದ್ದಾರೆ. ಚಿತ್ರದುರ್ಗದ ಅಭಿಮಾನೋತ್ಸವ ಕಾರ್ಯಕ್ರಮದಿಂದಲೇ ಬಿಜೆಪಿ ಚುನಾವಣಾ ತಯಾರಿ ನಡೆಯಲಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ.ಕುಮಾರಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಿಜೆಪಿ ಮುಖಂಡರಾದ ಸಿ.ಎಂ. ಗುರುಸಿದ್ದಯ್ಯ, ಮಂಗೇನಹಳ್ಳಿ ಲೋಹಿತ್, ಸಂತೆಬೆನ್ನೂರು ಬಸವರಾಜಪ್ಪ, ದೇವರಹಳ್ಳಿ ಎ.ಎಸ್. ಬಸವರಾಜಪ್ಪ, ಕುಬೇಂದ್ರೋಜಿ ರಾವ್, ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ರೂಪ ವೆಂಕಟೇಶ್, ಶಶಿಕಲಾ ನಾಗರಾಜ್, ಹೊನ್ನೇಬಾಗಿ ಅಣ್ಣೇಶ್, ಎಂ.ಯು.ಚನ್ನಬಸಪ್ಪ, ಕಾರ್ಯಕರ್ತರು ಭಾಗವಹಿಸಿದ್ದರು.
- - --28ಕೆಸಿಎನ್‌ಜಿ5:
ಸಭೆಯಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು.