ಹಗರಿಬೊಮ್ಮನಹಳ್ಳಿ: ಪಟ್ಟಣದ ಬನಶಂಕರಿ ದೇಗುಲದ ಹಾಗೂ ದೇವಾಂಗ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಈ ವರ್ಷಾಂತ್ಯದೊಳಗೆ ₹೩೦ ಲಕ್ಷ ಅನುದಾನ ಒದಗಿಸಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು.
ತಾಲೂಕು ಬನಶಂಕರಿ ದೇವಿ ಸೇವಾ ಟ್ರಸ್ಟ್ ಪದಾಧಿಕಾರಿಗಳ ಆಹ್ವಾನದ ಮೇರೆಗೆ ಪಟ್ಟಣದ ನೇಕಾರ ಕಾಲನಿಯ ಬನಶಂಕರಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ, ಟ್ರಸ್ಟ್ ಪದಾಧಿಕಾರಿಗಳಿಂದ ಸಮುದಾಯ ಭವನದ ಕ್ರಿಯಾ ಯೋಜನೆಯ ಪ್ರತಿ ಸ್ವೀಕರಿಸಿ ಬಳಿಕ ದೇಗುಲದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಕೆಕೆಆರ್‌ಡಿಬಿ ಅಥವಾ ಬೇರೆ ಯಾವುದಾದರೂ ಅನುದಾನ ಒದಗಿಸಲು ಸಮುದಾಯ ಭವನ ನಿವೇಶನದ ಇ-ಸ್ವತ್ತು ತೀರಾ ಅಗತ್ಯವಾಗಿದೆ. ಸಿದ್ಧಪಡಿಸಿಕೊಳ್ಳಿ ಎಂದು ಪದಾಧಿಕಾರಿಗಳಿಗೆ ಸೂಚಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಐಎಎಸ್ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಅರಿವು ಇರುವುದಿಲ್ಲ. ಇಲ್ಲಿ ಅಧಿಕಾರಿಗಳದ್ದೇ ಕಾರುಬಾರಾಗಿದೆ. ಮಂಡಳಿ ವ್ಯಾಪ್ತಿಯ ೪೧ ವಿಧಾನಸಭಾ ಕ್ಷೇತ್ರಗಳ ಎಲ್ಲ ಶಾಸಕರನ್ನು ಈವರೆಗೂ ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ದೂರಿದರು.ಮಂಡಳಿಯಲ್ಲಿ ಬರೀ ಕಾಂಗ್ರೆಸ್ ಶಾಸಕರೇ ತುಂಬಿಕೊಂಡಿದ್ದಾರೆ. ಪರಿಣಾಮವಾಗಿ ಜೆಡಿಎಸ್, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಅನುದಾನವಿಲ್ಲದೇ ಅಭಿವೃದ್ಧಿಯಿಂದ ವಂಚಿತವಾಗಿವೆ. ಈ ಕುರಿತು ತಾವು ಮುಖ್ಯಮಂತ್ರಿಗೆ ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದರು.
ನಂತರ ಕಾಲನಿಯ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಗಳನ್ನು ಪರಿಶೀಲಿಸಿದ ಶಾಸಕರು, ಗ್ರಂಥಾಲಯ ಮೇಲ್ವಿಚಾರಕಿ ಶಿವಲೀಲಾ ವೀರೇಶ್ ಮಜ್ಜಗಿ ಅವರಿಗೆ ಶಿಕ್ಷಣ ಇಲಾಖೆಯ ಅನುದಾನದಲ್ಲಿ ₹೨೫ ಲಕ್ಷ ಒದಗಿಸುವ ಭರವಸೆಯನ್ನು ನೀಡಿದರು. ಕಟ್ಟಡವನ್ನು ನವೀಕರಣಗೊಳಿಸಿ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಷ ನೀಡಿ ನಾಗರೀಕ ಸೇವೆಗಳ ಪರೀಕ್ಷಾರ್ಥಿಗಳಿಗೆ ನೆರವಾಗುವ ಗ್ರಂಥಗಳ ಸಂಗ್ರಹಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ಅಂಬಳಿ ಮಂಗಳಗೌರಮ್ಮ, ಅಂಬಳಿ ರವೀಂದ್ರಗೌಡ, ಜಿ.ಎಂ. ಜಗದೀಶ್, ಈ.ಕೃಷ್ಣಮೂರ್ತಿ, ಚಿತವಾಡಗಿ ಪ್ರಕಾಶ್, ಬಿಸ್ನಳ್ಳಿ ಬಸವರಾಜ್, ಟ್ರಸ್ಟ್ ಅಧ್ಯಕ್ಷ ನೇಗಿಗೌಡ್ರು ವಿರೂಪಾಕ್ಷಪ್ಪ, ಉಪಾಧ್ಯಕ್ಷ ಜಿ.ಚನ್ನಬಸವಗೌಡ, ಎಸ್.ಶಂಕರಾನಂದ್ ಹಾಗೂ ಟ್ರಸ್ಟ್ ಮತ್ತು ರಾಘವೇಂದ್ರ ಪಾದಯಾತ್ರೆ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.