ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾದ್ಯಂತ 25 ಸಾವಿರಕ್ಕೂ ಹೆಚ್ಚು ಮಂದಿಯಿಂದ ಬಿಜೆಪಿಗೆ ಸದಸ್ಯತ್ವ ನೋಂದಾವಣೆಯಾಗಿದೆ. 4 ಲಕ್ಷ ನೋಂದಣಿ ಗುರಿ ಹೊಂದಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯು ಈಗಾಗಲೇ ದೇಶವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಸಂವಿಧಾನ ರಕ್ಷಿಸುತ್ತೇವೆ ಎಂದು ರಾಹುಲ್ ಗಾಂಧಿ ಪ್ರಚಾರ ಮಾಡಿದ್ದರು. ಆದರೆ, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ತಮ್ಮ 40 ವರ್ಷದ ಸುಧೀರ್ಘ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದಿರುವ ಮುಖ್ಯಮಂತ್ರಿ ಅವರು, ಇಂದು ಬರೀ ರಾಜ್ಯವಲ್ಲ ಇಡೀ ದೇಶವೇ ಮೈಸೂರು ಮುಡಾ ಹಗರಣವನ್ನು ನೋಡುವಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಪ್ರಭಾವ ಬಳಸಿ ಅವರ ಕುಟುಂಬ ಲಾಭ ಪಡೆದು ಕೊಂಡಿದೆ ಎಂದು ಆರೋಪಿಸಿದರು.ರಾಜ್ಯಪಾಲರು ಸಂವಿಧಾನ ಬದ್ಧವಾದ ಜವಾಬ್ದಾರಿ ಹೊಂದಿ ಮುಡಾ ಹಗರಣ ಕೂಲಂಕುಶ ಪರಿಶೀಲಿಸಿ ಮೇಲ್ನೋಟಕ್ಕೆ ಭ್ರಷ್ಟಾಚಾರ ಕಂಡು ಬಂದಿದೆ ಎಂದು ವಿಚಾರಣೆಗೆ ಅನುಮತಿ ನೀಡಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಹಿಯ್ಯಾಳಿಸಿರುವುದು ನಾಚಿಕೆ ಸಂಗತಿ ಎಂದು ಕಿಡಿಕಾರಿದರು.
ಉಚ್ಚ ನ್ಯಾಯಾಲಯವು ಕೂಡ ವಿಚಾರಣೆ ಸರಿ ಇದೆ ಎಂದ ಮೇಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡತನ ತೋರುತ್ತಿದ್ದಾರೆ. ಸಂವಿಧಾನ ಉಳಿಸಿ ಮತ್ತು ಗೌರವಿಸಿ ಎನ್ನುವ ಕಾಂಗ್ರೆಸ್ ಕಟ್ಟಾಳುಗಳು ಎಲ್ಲಿ ಹೋದರು? ಜೊತೆಗೆ ಬೀದಿಯಲ್ಲಿ ಸಂವಿಧಾನ ಉಳಿಸಿ ಎನ್ನುವವರಿಗೆ ಅಗೌರವ ತೋರುತ್ತಿರುವ ಸಿದ್ದರಾಮಯ್ಯ ಅವರ ನಡೆ ಕಾಣುತ್ತಿಲ್ಲವೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಸಾದೊಳಲು ಸ್ವಾಮಿ, ವಿವೇಕ್, ವಸಂತ್ ಕುಮಾರ್, ಕೃಷ್ಣ ಇದ್ದರು.