ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
೫೪೦ ಹಂಚುಗಳನ್ನು ೧ ನಿಮಿಷ ೫೭ ಸೆಕೆಂಡುಗಳಲ್ಲಿ ಎರಡೂ ಕೈಗಳಿಂದ ಪುಡಿಗಟ್ಟುವ ಮೂಲಕ ಕರಾಟೆ ಪಟು ಮಹಮ್ಮದ್ ನದೀಂ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾದರು. ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸ್ಪರ್ಧೆಗಳ ಫಲಿತಾಂಶಗಳನ್ನು ದಾಖಲೀಕರಿಸಿ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಸ್ಥೆಯಾಗಿದೆ.
ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಕರಾಟೆ ರಿಯೂ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ಕರಾಟೆ ಕಾರ್ನಿವಲ್‌ನಲ್ಲಿ ಮಹಮ್ಮದ್ ನದೀಂ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಕೈಯಲ್ಲಿ ಮೊಟ್ಟೆಯನ್ನು ಹಿಡಿದು ೫೮ ಸೆಕೆಂಡುಗಳಲ್ಲಿ ೧೫೬ ಹೆಂಚುಗಳನ್ನು ಒಡೆಯುವ ಮೂಲಕ ಪ್ರಖ್ಯಾತ್ ಹೊಸ ದಾಖಲೆ ಸ್ಥಾಪಿಸಿದರೆ, ಅನುಷಾ ಅರುಣ್ ೧೧ ನಿಮಿಷ ೧೧ ಸೆಕೆಂಡುಗಳಲ್ಲಿ ೧ ಕೀ.ಮೀ ಸೈಡ್ ಕಿಕ್ ನೀಡುವ ಮೂಲಕ ಹೊಸ ದಾಖಲೆ ಬರೆದರು.
ಅಲ್ಲದೆ ಕರಾಟೆ ರಿಯೂನ ಸರ್ಫರಾಜ್ ೨೫ ನಿಮಿಷ ೪೫ ಸೆಕೆಂಡುಗಳಲ್ಲಿ ೨ ಕಿ.ಮೀ ದೂರ ಪ್ರೆಂಟ್ ಕಿಕ್ ನೀಡುವ ಮೂಲಕ ಹಳೆಯ ದಾಖಲೆಯನ್ನು ಮುರಿದರು. ಉಳ್ಳಾಲದ ಮಹಮ್ಮದ್ ಅಷ್ಪಾಕ್ ೧ ನಿಮಿಷದಲ್ಲಿ ೪೦೮ ಹೆಂಚುಗಳನ್ನು ದೇಹದಲ್ಲಿ ಒಡೆಸಿಕೊಂಡು ವಿಶ್ವ ದಾಖಲೆ ಸ್ಥಾಪಿಸಿದರು. ಪ್ರೆಸ್ಟೇಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ರಫಾನ್ ಮುನಾಫ್ ೨.೩೦ ಗಂಟೆಗಳ ಕಾಲ ನೀರಿನಲ್ಲಿ ತೇಲಿ ಆಂಧ್ರಪ್ರದೇಶದ ವಿದ್ಯಾರ್ಥಿಯೊಬ್ಬನ ಹೆಸರಲ್ಲಿದ್ದ ೨.೨೦ ಗಂಟೆಗಳ ಹಳೆಯ ದಾಖಲೆಯನ್ನು ಅಳಿಸಿದರು.
ಕರಾಟೆಪಟುಗಳ ಗುಂಪು ದಾಖಲೆಯಲ್ಲಿ ೧ ರಿಂದ ೧೦ ನೇ ತರಗತಿ ವರೆಗಿನ ೨೭೦ ಕ್ರೀಡಾಪಟುಗಳು ಏಕಕಾಲದಲ್ಲಿ ಹಣೆಯಿಂದ ಹೆಂಚು ಒಡೆಯುವುದು, ಮುಷ್ಠಿ ಪ್ರಹಾರ, ಕೈಯಲ್ಲಿ ಪಂಚು ಸಹಿತ ಕರಾಟೆಯ ವಿವಿಧ ರೂಪಗಳನ್ನು ಪ್ರದರ್ಶಿಸಿ ಗುಂಪು ದಾಖಲೆಯನ್ನು ತಮ್ಮದಾಗಿಸಿಕೊಂಡರು.