ಕನ್ನಡಪ್ರಭ ವಾರ್ತೆ ಶಿರಾ ಒಳ ಮೀಸಲಾತಿ ಜಾರಿಗೊಳಿಸದೆ ರಾಜ್ಯ ಸರ್ಕಾರ ೫೬ ಸಾವಿರ ಹುದ್ದೆಗಳ ನೇಮಕಾತಿ ಮಾಡಬಾರದು. ೨೪ ರಂದು ನಡೆಯುವ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಬೇಕು ಎಂದು ಆದಿಜಾಂಬವ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಆಗ್ರಹಿಸಿದರು.ಅವರು ಶನಿವಾರ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯುವಕರು ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ರವರ ೧೩೫ ನೇ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಣ, ಸಂಘಟನೆ ಒಗ್ಗಟ್ಟಿನ ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.

ಕನಕ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ಸರ್ಕಾರ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ಮೂಲಕ, ಸಮುದಾಯ ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಅವಕಾಶ ಕಲ್ಪಿಸಬೇಕು. ಒಳ ಮೀಸಲಾತಿಗಾಗಿ ೩೫೨ ಕಿಲೋಮೀಟರ್ ಪಾದಯಾತ್ರೆ ಮಾಡಿದ ಷಡಕ್ಷರಿ ಮುನಿ ಸ್ವಾಮೀಜಿಗಳ ಸಮುದಾಯದ ಬಗ್ಗೆ ಇರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ಎಂದರು. ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್. ಉಗ್ರೇಶ್ ಮಾತನಾಡಿ, ಸಮಾಜದಲ್ಲಿ ಸಮಾನತೆ ಬರಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಕಾರಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜನ್ಮ ಜಯಂತಿ ಮನೆಮನೆ ಹಬ್ಬವಾಗಬೇಕು ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಂದೇ ಸಮುದಾಯಕ್ಕೆ ಸೀಮಿತವಲ್ಲ, ಸಣ್ಣ ಸಣ್ಣ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ನೀಡಿದ ಶಿಲ್ಪಿ. ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಡಾ. ಕೆ. ನರಸಪ್ಪ, ಕಾಂಗ್ರೆಸ್ ಮುಖಂಡರ ರೂಪೇಶ್ ಕೃಷ್ಣಯ್ಯ , ನಾದೂರು ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಪಾರ್ವತಮ್ಮ, ಮೆಹರ್ ತಾಜ್ ಬಾಬು, ಮೇಘಶ್ರೀ, ಮಾದಿಗ ಮಹಾಸಭಾ ತಾಲೂಕ ಅಧ್ಯಕ್ಷ ಪಿ.ಬಿ. ನರಸಿಂಹಯ್ಯ, ಗ್ರಾ.ಪಂ. ಮಾಜಿ ಸದಸ್ಯ ಲಿಂಗಭೂಷಣ, ಭೂತರಾಜು, ಲಿಂಗರಾಜು ದಸಂಸ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೋದಂಡರಾಮ, ಸಂಚಾಲಕ ಪಿ.ಎನ್. ಮಂಜುನಾಥ್, ಶ್ರೀಧರ, ನಿವೃತ್ತ ಶಿಕ್ಷಕ ದ್ವಾರನಕುಂಟೆ ಡಾ.ಲಕ್ಷ್ಮಣ್, ಕೃತಿ ಮೊಬೈಲ್ ಮಂಜುನಾಥ್, ಶಿಕ್ಷಕ ಸಣ್ಣೀರಪ್ಪ, ಮುಖಂಡ ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯ ಮಹದೇವಮ್ಮ , ಕೊಟ್ಟ ರಂಗಯ್ಯ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಯುವಕರು ಸಾರ್ವಜನಿಕರು ಭಾಗವಹಿಸಿದ್ದರು.