ಕನ್ನಡಪ್ರಭ ವಾರ್ತೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಂಜಾವಧೂತ ಸ್ವಾಮೀಜಿಯವರ ವರ್ಧಂತಿ ಮಹೋತ್ಸವದ ಪ್ರಯುಕ್ತ ೨೧ರಂದು ಪ್ರತಿ ವರ್ಷದಂತೆ ನೀರಾವರಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು. ಶನಿವಾರ ನಗರದ ಕುಂಚಿಟಿಗರ ಸಂಘದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸ್ವಾಮೀಜಿಗಳು ಪ್ರತಿ ವರ್ಷದಂತೆ ನೀರಾವರಿ ಹಕ್ಕೊತ್ತಾಯ ಮಾಡುತ್ತಿದ್ದು ಮಧ್ಯ ಕರ್ನಾಟಕದ ಹಲವಾರು ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಹೇಮಾವತಿ, ಅಪ್ಪರ್‌ ಭದ್ರ, ಎತ್ತಿಹೊಳೆ, ಯೋಜನೆಗಳ ಮೂಲಕ ನೀರನ್ನು ಹರಿಸಬೇಕು. ಈ ಭಾಗದ ಜನರ ನೀರಿನ ದಾಹವನ್ನು ನೀಗಿಸಲು ಅವಿರತ ಶ್ರಮಿಸುತ್ತಿದ್ದಾರೆ. ಅವರ ನೀರಾವರಿ ತರಬೇಕೆಂಬ ಉದ್ದೇಶವನ್ನು ನಾವೆಲ್ಲರೂ ಸೇರಿ ಸಾಕಾರಗೊಳಿಸಬೇಕು. ಆದ್ದರಿಂದ ಈ ಭಾಗದ ಎಲ್ಲ ರೈತರು, ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ನಗರಸಭೆ ಸದಸ್ಯ ಆರ್.ರಾಮು ಮಾತನಾಡಿ ನಂಜಾವಧೂತ ಶ್ರೀಗಳ ನೀರಾವರಿ ಯೋಜನೆಗೆ ಪಕ್ಕದ ರಾಜ್ಯ ಸರ್ಕಾರಗಳು ಕೂಡ ಸ್ಪಂಧಿಸಿರುವುದು ಹೆಮ್ಮೆಯ ವಿಷಯ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಜೊತೆ ಜೊತೆಗೆ ಮಧ್ಯ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ನಮಗೆ ಅಗುತ್ತಿರುವ ಮೀಸಲಾತಿ ಅಸಮತೋಲನದ ಕಡೆ ಶ್ರೀಗಳ ಗಮನ ಹರಿಸುತ್ತಿದ್ದಾರೆ. ಆದ್ದರಿಂದ ಅವರ ವರ್ಧಂತಿ ಮಹೋತ್ಸವವನ್ನು ಪಟ್ಟನಾಯಕನಹಳ್ಳಿಯ ಜಾತ್ರಾ ಮಹೋತ್ಸವದ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ಎಲ್ಲ ಭಕ್ತರು ಆಗಮಿಸಿ ಯಶಸ್ವಿಗೊಳಿಸಿ ಎಂದರು. ಕುಂಚಿಟಿಗರ ಸಂಘದ ನಿರ್ದೇಶಕರಾದ ಎಂ.ರಂಗನಾಥ್ ಮಾತನಾಡಿ, ನಂಜಾವಧೂತ ಶ್ರೀಗಳ ಜನ್ಮಜಯಂತಿ ಮಹೋತ್ಸವವು ಮಧ್ಯಕರ್ನಾಟಕದ ಹಕ್ಕುಗಳ ನೆಲ, ಜಲ ಮತ್ತು ನಮ್ಮ ಪ್ರತಿಭಾನ್ವಿತ ವಿದ್ಯಾವಂತ ಯುವಕರ ಉದ್ಯೋಗ ಅವಕಾಶಕ್ಕಾಗಿ ನಮ್ಮ ಸಮಪಾಲಿನ ಹಕ್ಕಿಗಾಗಿ ಮಧ್ಯಕರ್ನಾಟಕ ಹಕ್ಕುಗಳನ್ನು ಕೂಡ ಕೇಳಬೇಕೆಂದು ಆ ನಿಮಿತ್ತ ಮಧ್ಯ ಕರ್ನಾಟಕದ ಧ್ವನಿಯಾಗಿದ್ದಾರೆ. ಶ್ರೀಗಳ ಜನ್ಮದಿನದ ವೇದಿಕೆ ನಮ್ಮ ಧ್ವನಿಯ ವೇದಿಕೆ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ವೇದಿಕೆ ನಮ್ಮನ್ನು ಎಚ್ಚರ ಗೊಳಿಸುವ ವೇದಿಕೆಯಾಗಿದೆ. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು. ವಕೀಲರ ಸಂಘದ ಅಧ್ಯಕ್ಷ ಎಚ್.ಗುರುಮೂರ್ತಿ ಗೌಡ ಮಾತನಾಡಿ ನಂಜಾವಧೂತ ಶ್ರೀಗಳು ಪ್ರತಿ ವರ್ಷವೂ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಒಂದೊಂದು ನೀರಾವರಿ ಯೋಜನೆಯ ಟಾಸ್ಕ್ ಕೊಡುತ್ತಾರೆ. ಇದರಿಂದ ಜನಪ್ರತಿನಿಧಿಗಳೂ ಸಹ ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿರತಹಳ್ಳಿ ಮಂಜುನಾಥ್, ಕುಂಚಿಟಿಗರ ಸಂಘದ ನಿರ್ದೇಶಕರಾದ ಡಿ.ಸಿ.ಅಶೋಕ್, ಎಂ.ವಿಜಯರಾಜ್, ಎಸ್.ಮಹಲಿಂಗಪ್ಪ, ಬಿ.ಜುಂಜಯ್ಯ, ಮದ್ದೆವಳ್ಳಿ ರಾಮಕೃಷ್ಣ, ಸಿ.ಎಂ.ಪ್ರಕಾಶ ಗೌಡ, ಎಂ.ಸಿ.ರಾಘವೇಂದ್ರ, ಕೆ.ಎಂ.ಶ್ರೀನಿವಾಸ್, ಬಿ.ಎಂ.ರಾಧಾಕೃಷ್ಣ, ಬಿ.ಬೊಪ್ಪಣ್ಣ, ಡಾ.ಶ್ರೀನಿವಾಸ್, ಮುಖಂಡರಾದ ನರೇಶ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.