ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಂದಿನ ಜಗತ್ತಿಗೆ ಕೇವಲ ಕೌಶಲ್ಯವಂಥ ವೃತ್ತಿಪರರು ಮಾತ್ರವಲ್ಲ, ಸಿದ್ಧಾಂತಬದ್ಧ ನಾಯಕರು ಮತ್ತು ಸಹಾನುಭೂತಿಯ ನಾಗರಿಕರ ಅಗತ್ಯವಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಯು.ಜೆ.ಉಜ್ವಲ‌ ಹೇಳಿದರು.

ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2023-25ನೇ ಸಾಲಿನ ಎಂಬಿಎ, ಎಂಸಿಎ, ಎಂಟೆಕ್ ಸ್ನಾತಕೋತ್ತರ ಪದವಿಧರರ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀವು ಪಡೆಯುವ ಪದವಿಯು, ಜೀವನದಲ್ಲಿ ಹೊಸ ಅಧ್ಯಾಯವೆಂಬ ಪ್ರಾರಂಭದ ಮುನ್ಸೂಚನೆ. ಬಿಎಂಡಬ್ಲೂ ಅಥವಾ ಮಾರುತಿ ಓಡಿಸಿದರೂ, ರಸ್ತೆ ಎಂಬುದು ಒಂದೇ ಆಗಿರುತ್ತದೆ. ಟೈಟನ್ ಅಥವಾ ರೋಲೆಕ್ಸ್ ಧರಿಸಿದರೂ, ಕಾಲ ಎಂಬುದು ಒಂದೇ ರೀತಿಯಲ್ಲಿ ಸಾಗುತ್ತದೆ ಎಂಬ ವಾಸ್ತವತೆಯನ್ನು ಅರಿಯಿರಿ. ನೀವು ಧರಿಸುವ ಲೇಬಲ್‌ಗಳು ಅಥವಾ ಹೊಂದುವ ಹುದ್ದೆಗಳಿಗಿಂತ, ಅನುಸರಿಸುವ ಮೌಲ್ಯಗಳು ಮತ್ತು ಸೌಜನ್ಯತೆ ಬದುಕಿನ ಉನ್ನತಿಗೆ ಮುಖ್ಯ ಎಂದರು.

ಬದುಕಿನ ಯಶಸ್ಸಿನ ಹಾದಿಯಲ್ಲಿ, ನೈತಿಕತೆಯನ್ನು ದಾರಿದೀಪವನ್ನಾಗಿಸಿಕೊಳ್ಳಿ. ಕುತೂಹಲವನ್ನು ನಿರಂತರ ಕಲಿಕೆಯ ಇಂಧನವಾಗಿಸಿಕೊಳ್ಳಿ. ಅನಿಶ್ಚಿತತೆಯ ಸಮಯದಲ್ಲಿ ಧೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ, ವಿನಯವು ಜೀವನಪೂರ್ಣ ಕಲಿಕೆಯ ನೆನಪಾಗಿ ಉಳಿಯಲಿ ಎಂದು ಹಾರೈಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಎಸ್‌) ಅನುಷ್ಠಾನದೊಂದಿಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ಪರಿವರ್ತನಾತ್ಮಕ ಹಂತವನ್ನು ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಕೌಶಲ್ಯ ಆಧಾರಿತ ಮತ್ತು ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಸಾಮರ್ಥ್ಯಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಹೆಚ್ಚಿಸುವತ್ತ ಕೇಂದ್ರಿಕರಿಸಲಾಗಿದೆ ಎಂದು ಹೇಳಿದರು.


ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಬೆಟ್ಟದಷ್ಟು ಜ್ಞಾನಕ್ಕಿಂತ, ಮುಷ್ಟಿಯಷ್ಟು ವಿವೇಕ ಮುಖ್ಯ. ಸಮಾಜಮುಖಿ ಕಾರ್ಯಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಬುದ್ಧಿಯಿರುವವನು ಯುದ್ಧವನ್ನು ಗೆಲ್ಲುತ್ತಾನೆ, ಆದರೆ ಬುದ್ಧಿಯೊಂದಿಗೆ ತಾಳ್ಮೆಯಿರುವವನು ಮನಸ್ಸು ಮತ್ತು ಜಗತ್ತನ್ನು ಗೆಲ್ಲುತ್ತಾನೆ. ಅದೃಷ್ಟ, ಹಣೆಬರಹದ ಹಿಂದೆ ಓಡದೆ, ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ, ಕೌಶಲ್ಯಪೂರ್ಣ, ಸಂಸ್ಕಾಯುತ ನಾಗರಿಕರಾಗಿ ಹೊರಹೊಮ್ಮಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಯಶಸ್ಸು ಅತ್ಯಂತ ಮಹತ್ವದ್ದಾಗಿದ್ದು, ಅದಕ್ಕೆ ಯಾವುದೇ ಒಳದಾರಿಗಳಿಲ್ಲ. ನೈತಿಕ ಮೌಲ್ಯಗಳ ಮಾರ್ಗದಲ್ಲಿ ನಡೆಯಿರಿ. ಏಕೆಂದರೆ ನಮ್ಮನ್ನು ನಿಜವಾಗಿ ರಕ್ಷಿಸುವುದು ನಮ್ಮ ನೈತಿಕತೆ ಮಾತ್ರ. ಆ ಮಾರ್ಗದಿಂದ ಕ್ಷಣಕಾಲ ದೂರವಾದಲ್ಲಿ, ನಮ್ಮ ಸಾಧನೆಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುತ್ತೇವೆ ಎಂದು ಹೇಳಿದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಶ್ರೀಕಾಂತ್, ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ.ಹೇಮಂತ್ ಕುಮಾರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್ ಕುಮಾರ್ ಮತ್ತಿತರರು ಹಾಜರಿದ್ದರು. ಎಂಸಿಎ ವಿದ್ಯಾರ್ಥಿನಿ ಅನುಶ್ರೀ ಪ್ರಾರ್ಥಿಸಿ, ಸಹ ಪ್ರಾಧ್ಯಾಪಕ ಡಾ.ವಿಕ್ರಮ್.ವಿ ನಿರೂಪಿಸಿದರು‌.

ಎನ್ಇಎಸ್ ಚಿನ್ನದ ಪದಕ ಪ್ರದಾನ

ವಿಟಿಯು ವ್ಯಾಪ್ತಿಯ ಎಂಬಿಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ.ಜೆ. ಸಾಲೇರ ಅವರಿಗೆ ಎನ್ಇಎಸ್ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ ಕೊಡಮಾಡುವ, ಎನ್ಇಎಸ್ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದ ಸಂಜಯ್.ಎಂ.ವಿ ಅವರನ್ನು ಅತಿಥಿಗಳು ಸನ್ಮಾನಿಸಿದರು.