ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಂದಿನ ದಿನಗಳಲ್ಲಿ ಕೇಂದ್ರ ವೇತನ ಆಯೋಗ ನೀಡುವ ವರದಿಯನ್ನೇ ಯಥಾವತ್ತಾಗಿ ನಮ್ಮ ರಾಜ್ಯದ ಸರ್ಕಾರಿ ನೌಕರರಿಗೂ ಅನ್ವಯವಾಗುವಂತೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆಯಲ್ಲದೇ ಅದನ್ನು ಜಾರಿ ತರುವುದು ಶತ:ಸಿದ್ದ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ನಗರದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ.ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಬೋಧಕೇತರ ನೌಕರರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಈಗಾಗಲೇ ಈ ನಿಟ್ಟಿನಲ್ಲಿ ನಮ್ಮ ಸಂಘ ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ತಂದಿದೆ. ಈ ಬಗ್ಗೆ ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಿದೆ ಎಂದರಲ್ಲದೇ ವಿಶ್ವವಿದ್ಯಾನಿಲಯ ಒಂದು ಸ್ವಾಯುತ್ತ ಸಂಸ್ಥೆಯಾದರೂ ಕೂಡ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕೂಡ ನಮ್ಮ ನೌಕರರುಗಳೆಂದೇ ರಾಜ್ಯ ಸರ್ಕಾರಿ ನೌಕರರ ಸಂಘ ಭಾವಿಸಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ನಮ್ಮ ನೌಕರರಿಗೆ ದೊರಕಿದರೂ ಕೂಡ ಆ ಸೌಲಭ್ಯ ವಿವಿ ನೌಕರರಿಗೂ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ಸಂಘಟನಾ ಚಾತುರ್ಯ ಹೊಂದಿರುವ ರಮೇಶ್ ಶಂಕರಘಟ್ಟರವರು ಈ ಸಂಘದ ನೇತೃತ್ವ ವಹಿಸಿರುವುದರಿಂದ ಈ ಸಂಘ ಕಂಡಿಯವಾಗಿಯೂ ಯಶಸ್ವಿ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರತ್ ಆನಂತಮೂರ್ತಿ, ಪರೀಕ್ಷಾಂಗದ ಕುಲಸಚಿವ ಪ್ರೊ.ಆರ್.ತಿಮ್ಮರಾಯಪ್ಪ ಹಾಜರಿದ್ದರು. ಸಂಘದ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ಸ್ವಾಗತಿಸಿದರೆ, ಉಪಾಧ್ಯಕ್ಷರಾದ ಎಲ್.ಎಚ್. ಬಸವರಾಜ್ ವಂದಿಸಿದರು. ಸಂಘದ ಖಜಾಂಚಿ ಮಂಜುನಾಥ ಮನವಿ ಪತ್ರ ಓದಿದರು. ಕಾರ್ಯದರ್ಶಿ ಎಂ.ಸಿದ್ದರಾಮ ಕಾರ್ಯಕ್ರಮ ನಿರೂಪಿಸಿದರು.


ಕಾಲೇಜು ಅಭಿವೃದ್ಧಿಗೆ ಷಡಾಕ್ಷರಿ ಸಂಪರ್ಕ ಬಳಸಿಕೊಳ್ಳಿ

ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ, ಎಂ.ಟಿ.ಎ. ಬ್ಲಾಕ್ ಹಾಗೂ ವಿವಿ ಆವರಣದಲ್ಲಿರುವ ರಂಭಾಪುರಿ ಕಾಲೇಜಿಗೆ ಅನುದಾನಗಳು ಸಿಗುವಲ್ಲಿ ಸಿ.ಎಸ್.ಷಡಾಕ್ಷರಿಯವರು ಪ್ರಮುಖ ಪಾತ್ರ ವಹಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಕೊಳ್ಳಬೇಕಾಗುತ್ತದೆ. ಇವರು ಸರ್ಕಾರದ ಅಧಿಕಾರಗಳ ಮಟ್ಟದಲ್ಲಿ ಇಟ್ಟುಕೊಂಡಿರುವ ಸಂಪರ್ಕವನ್ನು ನಮ್ಮ ವಿವಿ ಬಳಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕುಲಪತಿಗಳಿಗೆ ತಿಳಿಸಬಯಸುತ್ತೇನೆ ಎಂದು ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಹೇಳಿದರು,