ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಬೆಮುಲ್)ಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಕ್ರಿಯಾಶೀಲ ರೈತ ಸದಸ್ಯರು ಮರಣ ಹೊಂದಿದಲ್ಲಿ ಅವರ ಕುಟುಂಬಗಳಿಗೆ ₹60 ಸಾವಿರ ಹಾಗೂ ಹಾಲು ಪೂರೈಕೆ ಮಾಡದ ಸದಸ್ಯರು ಮರಣ ಹೊಂದಿದಲ್ಲಿ ₹25 ಸಾವಿರ ಆರ್ಥಿಕ ನೆರವು ನೀಡಲು ಬೆಮುಲ್ ಆಡಳಿತ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ಮಾತನಾಡಿದ ಅವರು, ರೈತ ಸದಸ್ಯರಿಗೆ ₹1 ಲಕ್ಷವರೆಗೆ ವಿಮಾ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗಿತ್ತು. ಆದರೆ, ವಿಮಾ ಯೋಜನೆಯ ವಯೋಮಿತಿ ಕಾರಣದಿಂದ 70 ವರ್ಷ ಮೇಲ್ಪಟ್ಟ ಸಾವಿರಾರು ರೈತರು ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದ್ದುದರಿಂದ ಅದನ್ನು ಕೈಬಿಟ್ಟು, ರೈತ ಕಲ್ಯಾಣ ಸಂಘದ ಮೂಲಕ ನೇರವಾಗಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 33 ಸಾವಿರ ರೈತರು ಬೆಮುಲ್ ಸದಸ್ಯರಿದ್ದು, ಅವರಲ್ಲಿ 12 ರಿಂದ 15 ಸಾವಿರ ರೈತರು ನಿಯಮಿತವಾಗಿ ಹಾಲು ಪೂರೈಕೆ ಮಾಡುತ್ತಿದ್ದಾರೆ. ಉಳಿದ ಸುಮಾರು 18 ಸಾವಿರ ಸದಸ್ಯರು ಹಾಲು ಪೂರೈಕೆ ಮಾಡದಿದ್ದರೂ ಸದಸ್ಯತ್ವ ಹೊಂದಿದ್ದಾರೆ ಎಂದರು.

₹12.59 ಕೋಟಿ ಲಾಭ


2025-26ನೇ ಸಾಲಿನಲ್ಲಿ ಬೆಮುಲ್‌ಗೆ ₹12.59 ಕೋಟಿ ಲಾಭಾಂಶ ಬಂದಿದ್ದು, ಅದರ ಬಹುಪಾಲು ಮೊತ್ತವನ್ನು ರೈತ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ. ರೈತರಿಗೆ ಶೇ.60ರ ರಿಯಾಯಿತಿ ದರದಲ್ಲಿ ವಿವಿಧ ಉಪಕರಣಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಇದರಡಿ ₹2.50 ಕೋಟಿ ವೆಚ್ಚದಲ್ಲಿ 10 ಸಾವಿರ ರಬ್ಬರ್ ಮ್ಯಾಟ್‌ಗಳು, ₹1.68 ಕೋಟಿ ವೆಚ್ಚದಲ್ಲಿ 400 ಚಾಪ್ ಕಟರ್‌ಗಳು ಹಾಗೂ ₹35 ಲಕ್ಷ ವೆಚ್ಚದಲ್ಲಿ 100 ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗುವುದು. ಜೊತೆಗೆ 40 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿಗೆ ತಲಾ ₹5 ಲಕ್ಷದಂತೆ ಒಟ್ಟು ₹2 ಕೋಟಿ ಅನುದಾನ ನೀಡಲಾಗುವುದು. ಒಟ್ಟಾರೆ, ಲಾಭಾಂಶದಿಂದ ಸುಮಾರು ₹6.53 ಕೋಟಿ ಮೊತ್ತವನ್ನು ರೈತರ ಕಲ್ಯಾಣಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ.ಬಸವರಾಜ ಪರನ್ನವರ, ಬಾಬುರಾವ ವಾಘ್ಮೊಡೆ, ವಿರೂಪಾಕ್ಷ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರಿ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವಸಂತ ಕರಿಗಾರ, ಅಜೀತ ದೇಸಾಯಿ, ಬಸವರಾಜ ಮಾಳೇದವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.