ಪುತ್ತೂರು: ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶವಾಗಿರುವ ಪಾಣಾಜೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾಜ್ಯ ಸರಕಾರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದ್ದು, 12 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಸಮುದಾಯ ಆರೋಗ್ಯ ಕೇಂದ್ರದ ಲೋಕಾರ್ಪಣೆ ಶೀಘ್ರವೇ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಶಾಸಕರು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನೂತನ ಸಮುದಾಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಗಡಿ ಗ್ರಾಮದಲ್ಲಿ ಇಂಥಹದೊಂದು ಸುಸಜ್ಜಿತ ಸಮುದಾಯ ಕೇಂದ್ರದ ಅಗತ್ಯವಿದೆ ಎಂಬುದನ್ನು ಮನಗಂಡ ಸರ್ಕಾರ ಆಧುನಿಕ ಸೌಲಭ್ಯಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಾಣ ಮಾಡಿದೆ. ಪಾಣಾಜೆಯಲ್ಲಿ ಯಾವುದೇ ಕ್ಲಿನಿಕ್ ಕೂಡಾ ಇಲ್ಲದೇ ಇರುವುದು ಜನರಿಗೆ ತುಂಬಾ ತೊಂದರೆಯಾಗಿರುವುದನ್ನು ಮನಗಂಡ ಸರಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದೆ. ನೂತನ ಸಮುದಾಯ ಕೇಂದ್ರದಲ್ಲಿ 30 ಬೆಡ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಸಮುದಾಯ ಆರೋಗ್ಯ ಕೇಂದ್ರ ಒಂದು ವರ್ಷದ ಹಿಂದೆಯೇ ಲೋಕಾರ್ಪಣೆಯಾಗಬೇಕಿತ್ತು. ಆದರೆ ಕಾಮಗಾರಿ ಅಪೂರ್ಣವಾದ ಕಾರಣ ಮತ್ತು ಅರಣ್ಯ ಇಲಾಖೆಯಿಂದ ಎನ್ಒಸಿ ಸಿಗುವಲ್ಲಿ ವಿಳಂಬಗೊಂಡಿದೆ. ಇನ್ನೂ ಕೂಡಾ ಚಿಕ್ಕ ಚಿಕ್ಕ ಕೆಲಸಗಳು ಬಾಕಿ ಇದೆ ಅದು ಎರಡು ತಿಂಗಳಲ್ಲಿ ಪೂರ್ಣವಾಗಲಿದೆ. ಮೇಲ್ಬಾಗದಲ್ಲಿ ಶೀಟ್ ಹಾಕುವ ಕಾಮಗಾರಿ ಬಾಕಿ ಇದ್ದು ಅದರ ಕಾಮಗಾರಿ ಶೀಘ್ರ ಪೂರ್ಣವಾಗಲಿದೆ ಎಂದು ತಿಳಿಸಿದರು. ತಾಲೂಕಿಗೆ 2 ಎಂಡೋ ಸಲ್ಫಾನ್ ಕೇಂದ್ರ: ಪುತ್ತೂರು ತಾಲೂಕಿಗೆ ಸಂಬಂಧಪಟ್ಟಂತೆ ಕೊಯಿಲ ಮತ್ತು ಪಾಣಾಜೆಯಲ್ಲಿ ಎಂಡೋ ಪೀಡಿತರ ಚಿಕಿತ್ಸಾ ಕೇಂದ್ರವನ್ನು ಸರ್ಕಾರ ಮಂಜೂರು ಮಾಡಿದೆ. ಒಂದು ಎಂಡೋ ಚಿಕಿತ್ಸಾ ಕೇಂದ್ರಕ್ಕೆ ತಿಂಗಳಿಗೆ ರು. 4 ರಿಂದ 5 ಲಕ್ಷ ಆರ್ಥಿಕ ನೆರವನ್ನು ಸರ್ಕಾರ ಭರಿಸುತ್ತದೆ. ಎಂಡೋ ಪೀಡಿತರ ಫಿಸಿಯೋಥೆರಫಿ ಚಿಕಿತ್ಸೆಯೂ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ. ಸಾರ್ವಜನಿಕರು ಈ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದರು.
24/7 ಆರೋಗ್ಯ ಸೇವೆ: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಸರ್ಕಾರ 7 ಮಂದಿ ಡಿಗ್ರೂಪ್ ನೌಕರರು, 7 ಮಂದಿ ದಾದಿಯರು, ಹಾಗೂ 7 ಮಂದಿ ಸಿಬ್ಬಂದಿ ನೇಮಕಕ್ಕೆ ಅನುಮತಿಯನ್ನು ನೀಡಿದೆ. ಜೊತೆಗೆ 5 ಮಂದಿ ವೈದ್ಯರ ನೇಮಕಾತಿಗೂ ಸರಕಾರ ಅನುಮತಿ ನೀಡಿದೆ. ಪ್ರಸೂತಿ ತಜ್ಞರು, ಅನಸ್ತೇಶಿಯಾ ಸೇರಿದಂತೆ 5 ವಿವಿಧ ವೈದ್ಯರುಗಳ ಸೇವೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.ಪಾಣಾಜೆಯಲ್ಲಿ 180 ಎಂಡೋ ಪೀಡಿತರು: ಪಾಣಾಜೆ ಗ್ರಾಮದಲ್ಲಿ 180 ಎಂಡೋ ಪೀಡಿತರಿದ್ದಾರೆ ಇವರ ಪೈಕಿ 9 ಮಂದಿ ಮಲಗಿದ್ದಲ್ಲೇ ಇದ್ದಾರೆ. ಇಂಥವರ ಆರೋಗ್ಯ ಸೇವೆ ನೀಡಲು ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಚಿಕಿತ್ಸೆ ನೀಡುವ ವೈದ್ಯರ ತಂಡ ಇಲ್ಲಿ ಕಾರ್ಯಾಚರಿಸಲಿದೆ ಎಂದು ತಿಳಿಸಿದರು.ಲಿಫ್ಟ್ ಗೆ ಅನುದಾನ: ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಿಫ್ಟ್ ವ್ಯವಸ್ಥೆ ಇಲ್ಲದೇ ಇದ್ದು ಇದಕ್ಕಾಗಿ ಅನುದಾನವನ್ನು ಮೀಸಲಿಡಲಿದ್ದು, ವೈದ್ಯಕೀಯ ಪರಿಕರಗಳನ್ನು ಖರೀದಿಗೆ ರು.82 ಲಕ್ಷ ಅನುದಾನದ ಬೇಡಿಕೆ ಇದ್ದು ಅದನ್ನು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು. ಸಿಬ್ಬಂದಿಗಳಿಗೆ ಉಳಿದುಕೊಳ್ಳಲು ವಸತಿ ಕಟ್ಟಡದ ನಿರ್ಮಾಣ ಆಗಬೇಕಿದ್ದು ವರದಿ ಸಿದ್ಧಪಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಶಾಸಕರು ತಿಳಿಸಿದರು.ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಮ್ಮಯ್ಯ, ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ದೀಪಕ್ ರೈ, ಡಾ. ವೇದಾವತಿ, ಡಾ. ಸುಧಾಕರ್ , ಸಮಿತಿ ಸದಸ್ಯರಾದ ವಿಶ್ವನಾಥ ರೈ, ಸದಾನಂದ ನಾಯ್ಕ ಭರಣ್ಯ, ವಿಮಲಾ , ಅಬೂಬಕ್ಕರ್ ಆರ್ಲಪದವು, ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.‘ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ’
ಕರ್ನಾಟಕ ಮತ್ತು ಕೇರಳದ ಗಡಿ ಪ್ರದೇಶವಾಗಿರುವ ಪಾಣಾಜೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾಜ್ಯ ಸರಕಾರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದ್ದು, 12 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಸಮುದಾಯ ಆರೋಗ್ಯ ಕೇಂದ್ರದ ಲೋಕಾರ್ಪಣೆ ಶೀಘ್ರವೇ ನಡೆಯಲಿದೆ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.