7 ಸರ್ಕಾರಿ ಸಂಸ್ಥೆ ರದ್ದು, 9 ಸಂಸ್ಥೆ ವಿಲೀನಕ್ಕೆ ಶಿಫಾರಸು

| N/A | Published : Oct 17 2025, 01:00 AM IST / Updated: Oct 17 2025, 10:16 AM IST

rv deshpande
7 ಸರ್ಕಾರಿ ಸಂಸ್ಥೆ ರದ್ದು, 9 ಸಂಸ್ಥೆ ವಿಲೀನಕ್ಕೆ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅನುಪಯುಕ್ತ 7 ಮಂಡಳಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಅಮಾನತು ಮಾಡುವುದು ಹಾಗೂ 9 ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮಗಳೊಂದಿಗೆ ವಿಲೀನ ಮಾಡುವಂತೆ ರಾಜ್ಯ ಆಡಳಿತ ಸುಧಾರಣಾ ಆಯೋಗ-2ರ 9ನೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

  ಬೆಂಗಳೂರು :  ರಾಜ್ಯದಲ್ಲಿ ಅನುಪಯುಕ್ತ 7 ಮಂಡಳಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಅಮಾನತು ಮಾಡುವುದು ಹಾಗೂ 9 ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮಗಳೊಂದಿಗೆ ವಿಲೀನ ಮಾಡುವಂತೆ ರಾಜ್ಯ ಆಡಳಿತ ಸುಧಾರಣಾ ಆಯೋಗ-2ರ 9ನೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ವಿಧಾನಸೌಧದಲ್ಲಿ ಗುರುವಾರ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌.ವಿ.ದೇಶಪಾಂಡೆ, 9ನೇ ವರದಿಯಲ್ಲಿ ನಾಲ್ಕು ಪ್ರಮುಖ ಅಂಶಗಳ ಕುರಿತು ಶಿಫಾರಸು ಮಾಡಲಾಗಿದೆ. ಹಿಂದಿನ ಶಿಫಾರಸುಗಳ ಅನುಷ್ಠಾನ, ಮಂಡಳಿ, ನಿಗಮಗಳು, ಸರ್ಕಾರಿ ಸಂಘಗಳು ಮತ್ತು ಪ್ರಾಧಿಕಾರಗಳ ಪುನಾರಚನೆ, ಭೂಸ್ವಾಧೀನ ಮತ್ತು ಸಂಬಂಧಿತ ಸುಧಾರಣೆಗಳು ಹಾಗೂ ಸಾಮಾನ್ಯ ಆಡಳಿತಾತ್ಮಕ, ಹಣಕಾಸು ಮತ್ತು ಇ-ಆಡಳಿತ ಸುಧಾರಣೆಗಳ ಕುರಿತು 449 ಶಿಫಾರಸು ಮಾಡಲಾಗಿದೆ ಎಂದು ತಿಳಿಸಿರು.

ರಾಜ್ಯದ 148 ನಿಗಮ-ಮಂಡಳಿಗಳ ಪೈಕಿ 82 ಸಂಸ್ಥೆಗಳನ್ನು ಪರಿಶೀಲನೆಗೊಳಪಡಿಸಲಾಗಿದೆ. 5 ವರ್ಷಗಳ ಆರ್ಥಿಕ ವ್ಯವಹಾರ, ಅಧಿಕಾರಿ-ಸಿಬ್ಬಂದಿ ಕಾರ್ಯದೊತ್ತಡ, ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ರಾಜ್ಯ ಸಂಯಮ ಮಂಡಳಿ, ಸಹಕಾರಿ ಕೋಳಿ ಸಾಕಣೆ ಒಕ್ಕೂಟ, ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್, ರಾಜ್ಯ ಆಗ್ರೋ-ಕಾರ್ನ್ ಪ್ರಾಡಕ್ಟ್ಸ್‌ ಲಿಮಿಟೆಡ್, ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಮತ್ತು ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್‌ಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಅದರ ಜತೆಗೆ ಒಂದೇ ಕೆಲಸ ಮಾಡುವ ಮತ್ತು ಸದ್ಯ ಅವಶ್ಯಕತೆಯಿಲ್ಲದ 9 ಸರ್ಕಾರಿ ಸಂಸ್ಥೆಗಳನ್ನು ಬೇರೆ ಇಲಾಖೆ ಅಥವಾ ನಿಗಮ-ಮಂಡಳಿಗಳೊಂದಿಗೆ ವಿಲೀನಕ್ಕೆ ತಿಳಿಸಲಾಗಿದೆ. ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಕೈಗಾರಿಕೆ ನಿಗಮವನ್ನು ರೇಷ್ಮೆ ಮಾರುಕಟ್ಟೆ ಮಂಡಳಿ, ಆಹಾರ ಕರ್ನಾಟಕ ಲಿಮಿಟೆಡ್‌ನ್ನು ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ತುರ್ತು ನಿಗಮ, ಬೆಂಗಳೂರು ಸಬ್‌ಅರ್ಬನ್‌ ರೈಲು ಸಂಸ್ಥೆಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ-ರೈಡ್‌), ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮೈಸೂರು ಕ್ರೋಮ್‌ ಟ್ಯಾನಿಂಗ್‌ ಸಂಸ್ಥೆಯನ್ನು ಎಂಎಸ್ಐಎಲ್‌ನೊಂದಿಗೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮವನ್ನು ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ), ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)ಗಳನ್ನು ಸಂಬಂಧಿಸಿದ ನೀರಾವರಿ ನಿಗಮಗಳೊಂದಿಗೆ ವಿಲೀನಕ್ಕೆ ವರದಿಯಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.

ಭೂಸ್ವಾಧೀನ ಸುಧಾರಣೆ:

ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಇರುವ ವಿವಿಧ ಕಾಯ್ದೆಗಳಲ್ಲಿನ ಗೊಂದಲದಿಂದಾಗಿ ಯೋಜನೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿ ಎಲ್ಲ ಕಾಯ್ದೆಯಲ್ಲಿ ಏಕರೂಪತೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಅದಕ್ಕಾಗಿ ಕೆಐಎಡಿಬಿ ಕಾಯ್ದೆ, ಬಿಡಿಎ ಕಾಯ್ದೆ, ಕೆಎಚ್‌ಬಿ ಕಾಯ್ದೆ, ಕೊಳಗೇರಿ ಪ್ರದೇಶಗಳ ಕಾಯ್ದೆ, ನೀರಾವರಿ ಕಾಯ್ದೆಗಳಲ್ಲಿನ ವ್ಯತಿರಿಕ್ತ ನಿಬಂಧನೆಗಳನ್ನು ಪರಿಶೀಲಿಸಬೇಕು ಹಾಗೂ ಅವುಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ತಿದ್ದುಪಡಿ ತರಬೇಕು. ಅದರಲ್ಲೂ ಕೇಂದ್ರ ಕಾಯ್ದೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಯೋಗ ಶಿಫಾರಸು ಮಾಡಿದೆ ಎಂದು ದೇಶಪಾಂಡೆ ಹೇಳಿದರು.

ಭೂಸ್ವಾಧೀನ ವಿಳಂಬ ಮತ್ತು ಗೊಂದಲಗಳನ್ನು ತಡೆಯಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭೂಸ್ವಾಧೀನ ಅಧಿಕಾರಿಗಳನ್ನು ವರ್ಗಾಯಿಸಬಾರದು. ಯೋಜನೆ ಗಾತ್ರ ಮತ್ತು ಅವಧಿಗೆ ಅನುಗುಣವಾಗಿ ಅವಶ್ಯವಿರುವ ಸಹಾಯಕ ಸಿಬ್ಬಂದಿಯನ್ನು ಮಂಜೂರು ಮಾಡಬೇಕು. ಭೂಸ್ವಾಧೀನ ದಾಖಲೆಯನ್ನು ಭೂಮಿ ತಂತ್ರಾಂಶದೊಂದಿಗೆ ಸಂಯೋಜಿಸಬೇಕು, ಕಾಲಮಿತಿಯಲ್ಲಿ ಪರಿಹಾರ ಪಾವತಿ ಮೇಲ್ವಿಚಾರಣೆಗೆ ಒಂದೇ ಪೋರ್ಟಲ್ ಅಭಿವೃದ್ಧಿಪಡಿಸಬೇಕು ಹಾಗೂ ಸಂಯೋಜಿತ ಭೂ ನಿರ್ವಹಣಾ ವ್ಯವಸ್ಥೆ ಅನುಷ್ಠಾನಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಗುಣಮಟ್ಟ ಭರವಸೆ ವಿಭಾಗವನ್ನು ಬಲಗೊಳಿಸಬೇಕು. ವಿಭಾಗಕ್ಕೆ ತಾಂತ್ರಿಕ ಸಿಬ್ಬಂದಿ, ಗುಮಾಸ್ತರನ್ನು ನಿಯೋಜಿಸಬೇಕು. ಜತೆಗೆ ಸಿಬ್ಬಂದಿ-ಅಧಿಕಾರಿಗಳಿಗೆ ಪರಿಣಿತರು ಮತ್ತು ಉಪನ್ಯಾಸಕರಿಂದ ತರಬೇತಿ ನೀಡಲು ಪಿಡಬ್ಲ್ಯುಡಿ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಗುಣಮಟ್ಟ ಮೇಲ್ವಿಚಾರಣೆಗೆ 500 ಎಂಜಿನಿಯರ್‌ಗಳನ್ನು ನೇಮಿಸಬೇಕು, ಗ್ರಾಪಂ ಸೇರಿದಂತೆ 20 ಸರ್ಕಾರಿ ಕಚೇರಿಗಳ ಸಂಪರ್ಕ ಕಲ್ಪಿಸಲು ಕೆ-ಸ್ವಾನ್‌ 3.0 ಅನುಷ್ಠಾನ ಮಾಡಬೇಕು ಹಾಗೂ ರಾಜ್ಯ ದತ್ತಾಂಶ ಕೇಂದ್ರ ವಿಸ್ತರಿಸಿ, ಆಧುನಿಕರಿಸಲು 250 ಕೋಟಿ ರು. ವೆಚ್ಚದಲ್ಲಿ ಉನ್ನತೀಕರಿಸಬೇಕು ಎಂದು ತಿಳಿಸಿದರು.

ನಿಷ್ಕ್ರಿಯ ಯೋಜನೆಗಳ ಪರಿಶೀಲನೆ:

ಯೋಜನಾ ಆಯೋಗವು ತನ್ನ 10ನೇ ವರದಿಯಲ್ಲಿ ರಾಜ್ಯದಲ್ಲಿನ ಅನುಪಯುಕ್ತ ಮತ್ತು ಅವಶ್ಯಕತೆಯಿಲ್ಲದ ಯೋಜನೆಗಳ ಪರಿಶೀಲನೆ ನಡೆಸಲಾಗುವುದು. ಸದ್ಯದ ಮಾಹಿತಿಯಂತೆ 1 ಸಾವಿರಕ್ಕೂ ಹೆಚ್ಚಿನ ಯೋಜನೆಗಳು ಈಗಿನ ಪರಿಸ್ಥಿತಿಗೆ ಅವಶ್ಯಕತೆಯಿಲ್ಲದಂತಿವೆ. ಅವುಗಳನ್ನು ಪರಿಶೀಲಿಸಿ ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಅದರ ಜತೆಗೆ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿನ ನಕಲಿ ಅಥವಾ ಅನಾವಶ್ಯಕ ಹುದ್ದೆಗಳನ್ನೂ ಪರಿಶೀಲಿಸಲಾಗುವುದು ಎಂದು ದೇಶಪಾಂಡೆ ಹೇಳಿದರು.

Read more Articles on