ಉಡುಪಿ: ದಾಖಲೆಗಳಿಲ್ಲದ 8 ಲಕ್ಷ ರು. ವಶ

| Published : Mar 27 2024, 01:11 AM IST

ಸಾರಾಂಶ

ಚುನಾವಣಾ ಅಕ್ರಮ ಬಗ್ಗೆ 241 ದೂರು ದಾಖಲಾಗಿವೆ. 238 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಹಣ ಸಾಗಾಟ ಮಾಡುತ್ತಿದ್ದ 2 ಪ್ರಕರಣಗಳು ಪತ್ತೆ ಹಚ್ಚಿ, ಸುಮಾರು 8 ಲಕ್ಷ ರು.ಗಳನ್ನು ವಶಪಡಿಸಿಕೊಳ‍್ಳಲಾಗಿದೆ.

ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ, ಕಾಪು ತಾಲೂಕಿನ ಉದ್ಯಾವರ ಚೆಕ್ ಪೋಸ್ಟಿನಲ್ಲಿ 4.51 ಲಕ್ಷ ರು. ಮತ್ತು ಬೈಂದೂರು ತಾಲೂಕಿನ ಶಿರೂರು ಚೆಕ್ ಪೋಸ್ಟಿನಲ್ಲಿ 3.50 ಲಕ್ಷ ರು.ಗಳನ್ನು ಅಧಿಕಾರಿಗಳು ಜಫ್ತು ಮಾಡಿದ್ದಾರೆ.

ಕಾಪು ತಾಲೂಕಿನ ಹೆಜಮಾಡಿ ಚೆಕ್‌ಪೋಸ್ಟ್ ನಲ್ಲಿ ಎಸ್.ಎಸ್.ಟಿ ತಂಡವು ದಾಖಲೆಗಳಲ್ಲದೇ ವಾಹನವೊಂದರಲ್ಲಿ ಸಾಗಿಸುತ್ತಿದ್ದ 79,737 ರು. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೆಂಡ - ಮದ್ಯ - ಗಾಂಜಾ ವಶ: ಹಿರಿಯಡ್ಕದಲ್ಲಿ ಎಫ್.ಎಸ್ ತಂಡವು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 7500 ರು. ಮೌಲ್ಯದ 100 ಲೀ. ಹೆಂಡವನ್ನು ವಶಪಡಿಸಿಕೊಂಡಿದೆ. ಉಡುಪಿ ಸೆನ್ ಠಾಣೆಯ ಪೊಲೀಸರು 44,000 ರು. ಮೌಲ್ಯದ 1.108 ಕೆ.ಜಿ. ಗಾಂಜಾ, ಕುಂದಾಪುರ ಠಾಣೆಯ ಪೊಲೀಸರು 1440 ರು. ಮೌಲ್ಯದ 3.240 ಲೀ. ಮದ್ಯ ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

241 ಅಕ್ರಮ ದೂರು, ಇತ್ಯರ್ಥ: ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಿವಿಜಿಲ್ ಮತ್ತು ಎನ್ ಜಿಆರ್ ಎಸ್ ಮೂಲಕ ಚುನಾವಣಾ ಅಕ್ರಮ ಬಗ್ಗೆ 241 ದೂರು, ಅಹವಾಲುಗಳು ದಾಖಲಾಗಿವೆ. ಅವುಗಳಲ್ಲಿ 238 ಪ್ರಕರಣಗಳನ್ನು ಜಿಲ್ಲಾ ಚುನಾವಣಾ ಆಯೋಗದ ಇತ್ಯರ್ಥ ಪಡಿಸಿದ್ದು, 5 ಪುನರಪಿ ದೂರುಗಳಾಗಿವೆ.

1200 ಕಾರ್ಯಕ್ರಮ ಪರವಾನಿಗೆ: ಜಿಲ್ಲೆಯಲ್ಲಿ ರಾಜಕೀಯತರ 1200ಕ್ಕೂ ಹೆಚ್ಚು ಮದುವೆ, ಉತ್ಸವ, ಸನ್ಮಾನ, ವಾರ್ಷಿಕೋತ್ಸವ, ಸಂಗೀತ ಕಾರ್ಯಕ್ರಮ ಕ್ರಿಕೆಟ್ ಇತ್ಯಾದಿ ಪಂದ್ಯಾಟಗಳಿಗೆ, ಚುನಾವಣಾ ಆಯೋಗದ ನಿಯಮಾನುಸಾರ ಪರವಾನಿಗೆ ನೀಡಲಾಗಿದೆ ಎಂದು ಡಿಸಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.