ಸಾರಾಂಶ
ಹಳಿಯಾಳ: ಪಂಢರಾಪುರ ದಿಂಡಿ ತೀರ್ಥಯಾತ್ರೆ ಮುಗಿಸಿ ಬಂದಿದ್ದ ತಾಲೂಕಿನ ಮಾಗವಾಡ ಗ್ರಾಮದ ದನಗರ ಗೌಳಿ ಸಮುದಾಯದ 15ಕ್ಕೂ ಹೆಚ್ಚು ಭಕ್ತರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದ್ದು, ಅವರನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಹಾರ ಅಜೀರ್ಣ ಹಾಗೂ ಅಶುದ್ಧ ಕುಡಿಯುವ ನೀರಿನಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ತೀವ್ರ ಅಸ್ವಸ್ಥರಾದ 9 ಜನರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಘಟನೆಯ ಹಿನ್ನೆಲೆ: ಎಂದಿನಂತೆ ಈ ವರ್ಷವೂ ಪಂಢರಾಪುರದಲ್ಲಿ ನಡೆಯುವ ಮಾಗವಾರಿಯಲ್ಲಿ ಪಾಲ್ಗೊಳ್ಳಲು ಹಲವು ಭಕ್ತರು ತೆರಳಿದ್ದರು. ಭಾನುವಾರ ಯಾತ್ರೆ ಮುಗಿಸಿ ಮಾಗವಾಡಕ್ಕೆ ಆಗಮಿಸಿದ್ದರು. ಅದೇ ದಿನ ದಿಂಡಿ ತಂಡದ 6 ಸದಸ್ಯರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.ಅವರನ್ನು ತಾಲೂಕು ಆಸ್ಪತ್ರೆಗೆ ತಂದು ತಪಾಸಣೆ ಮಾಡಿಸಿಕೊಂಡು ಮನೆಗೆ ತೆರಳಿದ್ದರು. ಗುರುವಾರ ವಾಂತಿ- ಭೇದಿಯ ಪ್ರಮಾಣ ಹೆಚ್ಚಾಗಿದ್ದರಿಂದ ಅಸ್ವಸ್ಥಗೊಂಡ 9 ಜನರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಒಟ್ಟು 15ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ ಕದಂ, ಡಾ. ಗಣೇಶ ಅರಶಿಣಗೇರಿ, ಡಾ. ಸೀಮಾ ಅವರು ದಾಖಲಾದವರ ತಪಾಸಣೆ ನಡೆಸಿ ಚಿಕಿತ್ಸೆ ಆರಂಭಿಸಿದ್ದಾರೆ.ವ್ಯಕ್ತಿ ಮೇಲೆ ಹಲ್ಲೆ: ಮೂವರು ಅಪರಾಧಿಗಳಿಗೆ ಶಿಕ್ಷೆ
ಶಿರಸಿ: ಸಿದ್ದಾಪುರ ತಾಲೂಕಿನ ಹಳದೋಟದಲ್ಲಿ ಮೂವರು ಸೇರಿ ಮನೆಯೊಳಗಡೆ ಅಕ್ರಮ ಪ್ರವೇಶಿಸಿ, ಹಲ್ಲೆ ನಡೆಸಿದ ಮೂವರು ಅಪರಾಧಿಗಳಿಗೆ ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ.ಅಪರಾಧಿಗಳಾದ ಸಿದ್ದಾಪುರ ತಾಲೂಕಿನ ಹಳದೋಟದ ಚಂದ್ರಶೇಖರ ರಾಮಚಂದ್ರ ಹೆಗಡೆ, ಸದಾಶಿವ ಸೀತಾರಾಮ ಹೆಗಡೆ, ಪ್ರಸನ್ನ ಸೀತಾರಾಮ ಹೆಗಡೆಗೆ ಕೆಳ ನ್ಯಾಯಾಲಯವು ವಿಧಿಸಿದ ಶಿಕ್ಷೆಯನ್ನು ಕಾಯಂಗೊಳಿಸಿ ಆದೇಶ ಮಾಡಿದೆ.ಮೂವರು ಸೇರಿಕೊಂಡು ಮನೆಯ ಬಾಗಿಲನ್ನು ಮುರಿದು ಅಕ್ರಮವಾಗಿ ಪ್ರವೇಶಿಸಿ, ಹಲ್ಲೆ ನಡೆಸಿದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯವು 2024ರ ಸೆ. ೫ರಂದು ಆರೋಪವು ದೃಢವಾಗಿದ್ದರಿಂದ ಮೂವರು ಅಪರಾಧಿರಿಗೆ ೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ₹೨೧ ಸಾವಿರದಂತೆ ಒಟ್ಟು ₹೬೩ ಸಾವಿರ ದಂಡ ವಿಧಿಸಿ ಹಾಗೂ ದಂಡದ ಹಣವನ್ನು ಗಾಯಾಳುವಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ತೀರ್ಪು ನೀಡಿತ್ತು. ತೀರ್ಪಿನ ಆದೇಶದ ವಿರುದ್ಧ ಅಪರಾಧಿಗಳು ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಕೆಳ ನ್ಯಾಯಾಲಯದ ತೀರ್ಪನ್ನೆ ಎತ್ತಿ ಹಿಡಿದಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದರು.