ಸಾರಾಂಶ
ವಿಧಾನಪರಿಷತ್ ಸದಸ್ಯತ್ವ ನೀಡುವ ಭರವಸೆ ನೀಡಿರುವ ಕಾಂಗ್ರೆಸ್?ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೊನೆಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಅಳೆದುತೂಗಿ ಗಟ್ಟಿ ಮನಸ್ಸು ಮಾಡಿರುವ ಸಂಸದ ಸಂಗಣ್ಣ ಕರಡಿ ಅವರಿಗೆ ಕಾಂಗ್ರೆಸ್ಸಿನಲ್ಲಿ ಯಾವ ಸ್ಥಾನಮಾನ ಸಿಗಲಿದೆ? ಎಂಬ ಚರ್ಚೆ ಜೋರಾಗಿ ಆರಂಭವಾಗಿದೆ.
ಕಳೆದೊಂದು ವಾರದಿಂದ ನಡೆದ ಹಗ್ಗಾಜಗ್ಗಾಟದಲ್ಲಿ ಕೊನೆಗೂ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆಯಾಗುವುದು ಪಕ್ಕಾ ಆಗಿದ್ದು, ಅವರು ಸಂಸದ ಸ್ಥಾನ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರುವುದಷ್ಟೇ ಬಾಕಿ ಉಳಿದಿದೆ.ಕಳೆದೆರಡು ದಿನಗಳಿಂದ ಕಾಂಗ್ರೆಸ್ ನಾಯಕರೊಂದಿಗೆ ಹಗಲು, ರಾತ್ರಿಯನ್ನದೆ ಕರಡಿ ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ನಿರಂತರವಾಗಿ ಚರ್ಚೆಯಲ್ಲಿದ್ದರು. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕರಡಿಗೆ ಭರವಸೆ ದೊರೆಯುತ್ತಿದ್ದಂತೆ ಮಂಗಳವಾರ ಸಂಜೆಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ಪತ್ರ ಫ್ಯಾಕ್ಸ್ ಮಾಡಿಸಿದ್ದಾರೆ. ಇನ್ನು ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೂ ಕಳುಹಿಸಿಕೊಟ್ಟಿದ್ದಾರೆ.
ಸಂಸದ ಸಂಗಣ್ಣ ಕರಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮಣ ಸವದಿ ಅವರು ಮನೆಯಲ್ಲಿ ಅರ್ಧಗಂಟೆ ಮಾತುಕತೆಯಾಡಿದರೂ ಇನ್ನು ಅವರು ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದರು. ಅದಾದ ಮೇಲೆ ಹೊಸಪೇಟೆಯ ಖಾಸಗಿ ಹೋಟೆಲ್‌ನಲ್ಲಿ ಕರಡಿ ಹಾಗೂ ಲಕ್ಷ್ಮಣ ಸವದಿ ಪುನಃ ಮಾತುಕತೆ ನಡೆಸಿದ್ದರು. ರಾಜ್ಯ ಹೈಕಮಾಂಡ್ ಜೊತೆಗೂ ಮಾತುಕತೆ ನಡೆಸಿ, ಫೈನಲ್ ಮಾಡಿದ್ದಾರೆ.ಆದರೂ ಬೆಳಗ್ಗೆ ಸಂಗಣ್ಣ ಗುಟ್ಟು ಬಿಟ್ಟುಕೊಡಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸಂಗಣ್ಣ ಕರಡಿ ಅವರ ನಿವಾಸಕ್ಕೆ ಹೋಗಿ, ಅವರ ಆಶೀರ್ವಾದ ಪಡೆದುಕೊಂಡ ಮೇಲೆಯೇ ಕಾಂಗ್ರೆಸ್ ಸೇರುವುದು ದೃಢವಾಯಿತು.
ಇದಾದ ಮೇಲೆ ಸಂಗಣ್ಣ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿ, ಕಾಂಗ್ರೆಸ್ ಸಮಾವೇಶ ಮುಗಿಯುವವರೆಗೂ ಕಾದು, ನಂತರ ಬೆಂಗಳೂರಿಗೆ ತೆರಳಿದರು.ಇವರನ್ನು ಹಿಂಬಾಲಿಸಿದ ಕಾಂಗ್ರೆಸ್ ನಾಯಕರು ಹಿರಿಯೂರಲ್ಲಿ ಸೇರಿದರು. ಸಂಸದ ಸಂಗಣ್ಣ ಕರಡಿ, ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ ಸಹಭಾಗಿತ್ವದಲ್ಲಿ ಹೋಟೆಲ್ಲೊಂದರಲ್ಲಿ ಚಹಾ ಕುಡಿದರು. ಈ ನಡುವೆ ಸಂಸದರು ಪಕ್ಷಕ್ಕೆ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಸ್ಥಾನಮಾನ ಏನು?:ಕರಡಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪ್ರಥಮ ಆದ್ಯತೆಯಾಗಿ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಮೊದಲ ಹಂತದಲ್ಲೇ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ಸೂಚಿಸಿಲ್ಲ. 2ನೇ ಹಂತದಲ್ಲಿ ಮಾಡಲಾಗುವುದು ಎಂದಿದ್ದಾರೆ. ಆದರೆ, ಇದರ ಕುರಿತೇ ಅಂತಿಮವಾಗಿ ಸವದಿ ಜೊತೆ ಚರ್ಚೆ ನಡೆದಿದೆ. ಏನು ಮಾತನಾಡಿದ್ದಾರೆ ಮತ್ತು ಯಾವಾಗ ವಿಧಾನಪರಿಷತ್ ಸದಸ್ಯತ್ವ ನೀಡಲಾಗುತ್ತದೆ ಎನ್ನುವುದು ಬಹಿರಂಗವಾಗಬೇಕಾಗಿದೆ.
ಕಾಂಗ್ರೆಸ್ ಸೇರ್ಪಡೆ ಇಂದು:ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಏ. 17ರಂದು ಬೆಳಗ್ಗೆ 10 ಗಂಟೆಗೆ ಸಂಗಣ್ಣ ಕರಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಪಕ್ಕಾ ಆಗಿದೆ.
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ:ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆ ಅಂಗೀಕರಿಸಬೇಕು ಎಂದು ಕೋರಿದ್ದಾರೆ.