ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಏ.19 ಮತ್ತು 28ರಂದು ಎಲ್ಲ ಮತಗಟ್ಟೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ವಿನೂತನ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರೆಲ್ಲರೂ ಪಾಲ್ಗೊಳ್ಳುವಂತೆ ಜಿ.ಪಂ.ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮನವಿ ಮಾಡಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮತದಾನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಪಿಡಿಒ, ಬಿಲ್‍ಒಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿ, ಎಲ್ಲ ಗ್ರಾ.ಪಂ ಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ವಿವಿಧ ರೀತಿಯಲ್ಲಿ, ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಬಿಎಲ್‍ಒಗಳು, ಪಿಡಿಒ, ಮತದಾರರ ವೇದಿಕೆಗಳು, ವಿವಿಧ ಸಂಘ ಸಂಸ್ಥೆಗಳವರು ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಿ-ವಿಜಿಲ್ ಆ್ಯಪ್ ಬಳಕೆ ಬಗ್ಗೆ ಹಾಗೂ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನೈತಿಕ ಚುನಾವಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು ಸಹ ಮತದಾನದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣಾ ಅಕ್ರಮಗಳು, ಅವ್ಯವಹಾರಗಳು ಕಂಡುಬಂದಲ್ಲಿ ತಮ್ಮ ಮೊಬೈಲ್ ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಸಾರ್ವಜನಿಕರನ್ನು ಮತದಾನದೆಡೆ ಪ್ರೇರೇಪಿಸುವಂತಹ ವಿವಿಧ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ನಡೆಸಿ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಸಾರ್ವಜನಿಕರು, ಎನ್‍ಜಿಒ, ಬಿಎಲ್‍ಒಗಳು ಸೇರಿದಂತೆ ಎಲ್ಲರೂ ಸ್ವೀಪ್ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕು. ಎಲ್ಲರೂ ನೈತಿಕ ಚುನಾವಣೆಗೆ ಕೈಜೋಡಿಸಬೇಕು ಹಾಗೂ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಜಿ.ಪಂ.ಸಿಪಿಒ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಮತದಾನ ಆಗುವ ಮತಗಟ್ಟೆಗಳು, ನಗರ ಭಾಗದಲ್ಲಿ ಸ್ಲಂ ಪ್ರದೇಶಗಳು, ಇತರೆಡೆ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮದ್ಯ, ಹೆಂಡ, ಹಣ ಇತರೆ ಆಮಿಷ ತೋರಿಸುವುದು, ಹೆದರಿಸಿ, ಬೆದರಿಸಿ ಮತ ಕೇಳುವುದು, ಕೋಮು ದ್ವೇಷ ಬಿತ್ತುವುದು, ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಸೇರಿದಂತೆ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ಸಿ-ವಿಜಿಲ್ ಮೂಲಕ ದೂರು ಸಲ್ಲಿಸಬಹುದು ಎಂದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಮಾತನಾಡಿ, ಎಲ್ಲ ಬಿಎಲ್‍ಓ ಗಳು ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮಗಳ ಕುರಿತು ಆಡಿಯೋ, ವಿಡಿಯೋ, ಚಿತ್ರಗಳನ್ನು ಹಾಗೂ ದೂರನ್ನು ಸಲ್ಲಿಸಬಹುದು. ದೂರು ನೀಡಿದ 90 ನಿಮಿಷದೊಳಗೆ ಎಫ್‍ಎಸ್‍ಟಿ, ಎಸ್‍ಎಸ್‍ಟಿ ತಂಡಗಳು ಕ್ರಮ ಕೈಗೊಳ್ಳಲಿದ್ದು, ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಸಿ-ವಿಜಿಲ್ ಅಲ್ಲದೇ 1950 ಸಂಖ್ಯೆಗೆ ಕರೆ ಮಾಡಿ ಸಹ ದೂರುಗಳನ್ನು ಸಲ್ಲಿಸಬಹುದು ಎಂದರು.ಜಾಗೃತ ಮತದಾರರ ವೇದಿಕೆ ಅಧ್ಯಕ್ಷ ಕೆ.ಸಿ.ಬಸವರಾಜಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಬಿಎಲ್‍ಒ, ಪಿಡಿಒಗಳು ಪರಿಣಾಮಕಾರಿ ಮತದಾನ ಜಾಗೃತಿ ಕಾರ್ಯಕ್ರಮಗಳ ಕುರಿತು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಬಿಎಲ್‍ಒಗಳು, ಪಿಡಿಒ, ಇತರೆ ಅಧಿಕಾರಿಗಳು ಹಾಜರಿದ್ದರು.