ಸಾರಾಂಶ
ಶಿಗ್ಗಾಂವಿ: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಿದ್ದು ಹರ್ಷವನ್ನು ತಂದಿದೆ ಎಂದು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ. ಆನಿಕಿವಿ ಹೇಳಿದರು.
ತಾಲೂಕಿನ ತಡಸ ಗ್ರಾಮದ ದುಂಡಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ೧೯೯೨-೯೩ನೇ ಸಾಲಿನ ವಿದ್ಯಾರ್ಥಿಗಳಿಂದ ೩೨ನೇ ವರ್ಷದ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂದರು.ಇದೇ ವೇಳೆ ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಾಂಧಿ ಶಿಕ್ಷಣ ಪ್ರಸಾರ ಸಮಿತಿ ಅಧ್ಯಕ್ಷ ಸುಭಾಸ ಆದಪ್ಪನವರ ಮಾತನಾಡಿ, ಯಾವುದೇ ವಿದ್ಯಾರ್ಥಿಗಳಾಗಲಿ ತಮ್ಮ ಶಾಲೆ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯದೆ ಅವರಿಗೆ ಗೌರವ ವಂದನೆಯನ್ನು ಸಲ್ಲಿಸುತ್ತಿರುವದು ಹರ್ಷ ತರುವ ಜೊತೆಗೆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಕಷ್ಟು ತಮ್ಮದೆ ವೃತ್ತಿಯಲ್ಲಿ ತೊಡಗಿದ್ದು ಶಾಲಾ ಅಭಿವೃದ್ಧಿಗೂ ಮುಂದಾಗಲು ಸಹಕಾರವನ್ನು ನೀಡಬೇಕು ಎಂದರು.ಕಾರ್ಯದರ್ಶಿ ಎಸ್.ವೈ. ನಂಜಪ್ಪನವರ, ಖಜಾಂಚಿ ರತ್ನಾಕರ ಅಣ್ಣಿಗೇರಿ, ಸದಸ್ಯ ಕೃಷ್ಣ ಚವಡಾಳ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎ.ಎಸ್. ಪಾಟೀಲ ಸೇರಿದಂತೆ ಶಾಲೆಯ ಎಲ್ಲ ಹಳೆಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.