ಸಾರಾಂಶ
188 ವರ್ಷಗಳ ಇತಿಹಾಸ ಹೊಂದಿರುವ ಹೆಬಿಕ್ ಚರ್ಚ್, ಆಲ್ ಸೆಂಟ್ ಚರ್ಚ್, ಸೆಂಟ್ ಜೋಸೆಫ್, ನಿರ್ಮಲ ನಗರದ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ, ಯೇಸುವಿನ ಕುರಿತಾದ ಸಮೂಹ ಗಾಯನ ನಡೆಯಿತು.
ಧಾರವಾಡ:
ಯೇಸುಕ್ರಿಸ್ತನ ಜನ್ಮ ದಿನದ ಅಂಗವಾಗಿ ಆಚರಿಸುವ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಂಧುಗಳು ಬುಧವಾರ ಧಾರವಾಡದಲ್ಲಿ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಿದರು.ಹಬ್ಬದ ಅಂಗವಾಗಿ ನಗರದ ಎಲ್ಲ ಚರ್ಚ್‌ಗಳು ಒಂದು ವಾರದಿಂದ ವಿದ್ಯುತ್ ದೀಪಗಳಿಂದ ಬೆಳಗುತ್ತಿದ್ದು, ಹಬ್ಬದ ತಯಾರಿ ಜೋರಾಗಿಯೇ ಇತ್ತು. ಡಿ. 1ರಿಂದಲೇ ಕ್ರೈಸ್ತನ ಆಗಮನವಾಗಿದ್ದು, ಹಬ್ಬದ ಮುನ್ನಾದಿನ ಮಂಗಳವಾರ ಮಕ್ಕಳ ಕ್ರಿಸ್‌ಮಸ್ ಆಚರಿಸಲಾಯಿತು.
ಇನ್ನು, 188 ವರ್ಷಗಳ ಇತಿಹಾಸ ಹೊಂದಿರುವ ಹೆಬಿಕ್ ಚರ್ಚ್, ಆಲ್ ಸೆಂಟ್ ಚರ್ಚ್, ಸೆಂಟ್ ಜೋಸೆಫ್, ನಿರ್ಮಲ ನಗರದ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ, ಯೇಸುವಿನ ಕುರಿತಾದ ಸಮೂಹ ಗಾಯನ ನಡೆಯಿತು. ಐತಿಹಾಸಿಕ ಮಹತ್ವವುಳ್ಳ ಹೆಬಿಕ್ ಚರ್ಚ್‌ನಲ್ಲಿ ಉತ್ತರ ಸಭಾಪ್ರಾಂತದ ಬಿಷೋಪ್ ರೆ. ಮಾರ್ಟಿನ್ ಬೋರ್ಗಾಯಿ ಕ್ರಿಸ್‌ಮಸ್ ಸಂದೇಶ ನೀಡಿದರು. ಜಗತ್ತಿನಲ್ಲಿ ಶಾಂತಿ ನೆಲೆಸಲು ಯೇಸುವಿನಲ್ಲಿ ಪ್ರಾರ್ಥನೆ ಮಾಡಲಾಯಿತು.ಇನ್ನು, ಮನೆ-ಮನೆಗಳಲ್ಲೂ ಕ್ರಿಸ್‌ಮಸ್ ಹಬ್ಬದ ಸಡಗರವಿತ್ತು. ಹಬ್ಬದ ನಿಮಿತ್ತ ಕೇಕ್ ಸೇರಿದಂತೆ ವಿಶೇಷ ಸಿಹಿ ತಿಂಡಿಗಳನ್ನು ಸಿದ್ಧಪಡಿಸಿ ಸ್ನೇಹಿತರಿಗೆ, ಸಂಬಂಧಿಗಳಿಗೆ ವಿತರಿಸಲಾಯಿತು. ಕ್ರಿಸ್ತನು ದನದ ಕೊಟ್ಟಿಗೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಕ್ರೈಸ್ತರ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆಗಳು ನಿರ್ಮಾಣವಾಗಿದ್ದವು. ಕ್ರಿಸ್‌ಮಸ್ ವೃಕ್ಷ, ವಿದ್ಯುತ್ ದೀಪಗಳು ಹಬ್ಬಕ್ಕೆ ಸಾಕ್ಷಿಯಾದವು. ಈ ಹಬ್ಬದಲ್ಲಿ ಸಾಂತಾಕ್ಲಾಸ್ ವೇಷಧಾರಿ, ಮೇಣದ ಬತ್ತಿ ಹಚ್ಚುವುದು ವಿಶೇಷ. ಕೆಲವರ ಮನೆಗಳಲ್ಲಿ ಕ್ರಿಸ್‌ಮಸ್ ನೃತ್ಯ, ಹಾಡುಗಳ ಕಾರ್ಯಕ್ರಮವೂ ಇತ್ತು. ಇನ್ನು ಕೆಲವರು ತಮ್ಮ ಸಮುದಾಯದ ಬಡವರಿಗೆ ದಾನ-ಧರ್ಮದ ಕಾರ್ಯವನ್ನು ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಹೆಬಿಕ್ ಚರ್ಚ್ ಸಭಾಪಾಲಕ ಸ್ಯಾಮುವೆಲ್ ಕ್ವಾಲೀನ್, ಉತ್ತರ ಸಭಾಪ್ರಾಂತದ ಕಾರ್ಯದರ್ಶಿ ವಿಲನ್ ಮೈಲಿ, ಬಾಸೆಲ್ ಮಿಶನ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕ್ರೈಸ್ತ ಸಮುದಾಯ ಇತ್ತು.