ಕಾರಟಗಿಯ ವಿವಿಧ ಚರ್ಚ್‌ಗಳಲ್ಲಿ ಆರಾಧನೆ

| Published : Dec 26 2024, 01:01 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕ್ಯಾಂಪ್ ಮತ್ತು ಹಳ್ಳಿಗಳಲ್ಲಿನ ಕೈಸ್ತ ಬಾಂಧವರು ಬುಧವಾರ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮ, ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕ್ಯಾಂಪ್ ಮತ್ತು ಹಳ್ಳಿಗಳಲ್ಲಿನ ಕೈಸ್ತ ಬಾಂಧವರು ಬುಧವಾರ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮ, ಶ್ರದ್ಧಾಭಕ್ತಿಯಿಂದ ಆಚರಿಸಿದರು. ವಿವಿಧ ಚರ್ಚ್‌ಗಳಲ್ಲಿ ಯೇಸು ಪ್ರಾರ್ಥನೆ ಮಾಡಿದರು.

ಕ್ರಿಸ್ಮಸ್ ನಿಮಿತ್ತ ಬುಧವಾರ ಬೆಳಗ್ಗೆ ಕೈಸ್ತ ಸಮುದಾಯದವರು ಚರ್ಚ್‌ಗಳಲ್ಲಿ ಸಭೆಗೆ ಸೇರಿ ಕ್ರಿಸ್ತನನ್ನು ಆರಾಧಿಸಿ ಸಂಭ್ರಮ ಪಟ್ಟರು. ಪ್ರಮುಖವಾಗಿ ಇಲ್ಲಿನ ಬೂದುಗುಂಪಾ ರಸ್ತೆಯಲ್ಲಿನ ಮೆಥೋಡಿಸ್ಟ್ ಚರ್ಚ್‌ನ ಬಿಡುಗಡೆ ಮನೆಯಲ್ಲಿ ಪಾದ್ರಿ ರೇವ್ ಸುಧೀರ್ ನೇತೃತ್ವದಲ್ಲಿ ಬೆಳಗೆ ೧೦ ಗಂಟೆಯಿಂದ ಸಂಜೆ ೫ರ ವರೆಗೆ ಸತತವಾಗಿ ಕೈಸ್ತನ ಆರಾಧನೆ, ಲೋಕಲ್ಯಾಣಕ್ಕಾಗಿ ಪ್ರಾರ್ಥನೆ ನಡೆಯಿತು.

ಪಟ್ಟಣದ ಚರ್ಚ್‌ನಲ್ಲಿ ಪಾಸ್ಟರ್ ನಾಗೇಶ್ ಮತ್ತು ಪಾಸ್ಟರ್ ಆಸಾರಾಜು ರಾಮನಗರದ ಚರ್ಚ್‌ನಲ್ಲಿ ಪಾಸ್ಟರ್ ಸತ್ಯನಾರಾಯಣ, ಆರ್.ಜಿ. ರಸ್ತೆಯನ ಇಮ್ಮನುವೆಲ್ ಚರ್ಚ್‌ನಲ್ಲಿ ಸಭಾಪಾಲಕ ಪಾಸ್ಟರ್ ಜಯರಾಜು ಅವರ ಸಮಕ್ಷಮದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಎಲ್ಲ ಚರ್ಚೆಗಳಲ್ಲಿ ಇಂದು ಸಾಮೂಹಿಕವಾಗಿ ಸರ್ವ ಜನರಿಗಾಗಿ, ಜನರ ರಕ್ಷಣೆಗಾಗಿ, ಒಳ್ಳೆಯ ಆರೋಗ್ಯಕ್ಕಾಗಿ, ರೈತರಿಗಾಗಿ, ಸರಿಯಾದ ಸಮಯದಲ್ಲಿ ಒಳ್ಳೆಯ ಮಳೆ ಹಾಗೂ ಉತ್ತಮ ಬೆಳೆ ಬರುವಂತೆ ಪ್ರಾರ್ಥನೆ ಮಾಡಲಾಯಿತು ಎಂದು ಕೈಸ್ತ ಸಮುದಾಯದ ಮುಖ್ಯಸ್ಥ ರಾಜು ಕಲ್ಗಡಿ ಹೇಳಿದರು.

ಇದೇ ರೀತಿ ತಾಲೂಕಿನ ಮರ್ಲಾನಹಳ್ಳಿ, ಚೆಳ್ಳೂರು ಕ್ಯಾಂಪ್ ಸೇರಿದಂತೆ ಸಿದ್ದಾಪುರ, ಗುಂಡೂರು ಕ್ಯಾಂಪ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು.

ಸೌಹಾರ್ದ ನೆಲೆಸಲಿ- ಎಚ್.ಆರ್. ಶ್ರೀನಾಥ:

ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಲಿ, ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಹೇಳಿದರು. ಗಂಗಾವತಿನಗರದ ಇಸಿಐ ಚರ್ಚ್‌ನಲ್ಲಿ ಜರುಗಿದ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಯಾವುದೋ ಕಾರಣಕ್ಕೆ ಯುದ್ಧಗಳು ನಡೆಯುತ್ತಲಿವೆ. ಇದರಿಂದ ಸಾಕಷ್ಟು ಸಾವು-ನೋವುಗಳು ಆಗುತ್ತಿದ್ದು, ಇದು ನಿಯಂತ್ರಣವಾಗಬೇಕಾಗಿದೆ ಎಂದರು. ಇದೇ ಸಂದರ್ಭ ಕ್ರೈಸ್ತ ಸಮಾಜದ ಫಾದರ್ ಮತ್ತು ಸಮಾಜದ ಮುಖಂಡರುಗಳಿಗೆ ಶುಭ ಕೋರಿದರು.