ಭಾರತ ಬಲಿಷ್ಠತೆಗೆ ಬದುಕು ಸಮರ್ಪಿಸಿದ ಪ್ರಧಾನಿ ವಾಜಪೇಯಿ

| Published : Dec 26 2024, 01:01 AM IST

ಸಾರಾಂಶ

ಇಡೀ ಬದುಕನ್ನು ರಾಷ್ಠದ ಹಿತಕ್ಕಾಗಿ ಸಮರ್ಪಿಸಿದ, ವಿಶ್ವವೇ ಮೆಚ್ಚುವಂತಹ ಉತ್ತಮ ಆಡಳಿತಕ್ಕೆ ಶಕ್ತಿ ತುಂಬಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅ‍ವರಾಗಿದ್ದಾರೆ. ಅವರ 100ನೇ ಹುಟ್ಟುಹಬ್ಬ ಆಚರಿಸುತ್ತಿರುವುದೇ ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ವಾಜಪೇಯಿ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಸ್ಮರಣೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇಡೀ ಬದುಕನ್ನು ರಾಷ್ಠದ ಹಿತಕ್ಕಾಗಿ ಸಮರ್ಪಿಸಿದ, ವಿಶ್ವವೇ ಮೆಚ್ಚುವಂತಹ ಉತ್ತಮ ಆಡಳಿತಕ್ಕೆ ಶಕ್ತಿ ತುಂಬಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅ‍ವರಾಗಿದ್ದಾರೆ. ಅವರ 100ನೇ ಹುಟ್ಟುಹಬ್ಬ ಆಚರಿಸುತ್ತಿರುವುದೇ ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿಯ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರೊಂದಿಗೆ ಬುಧವಾರ ವಾಜಪೇಯಿ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ, ಅವರು ಮಾತನಾಡಿದರು.

ಭಾರತದ ತಾಕತ್ತು ಎಂತಹುದು ಎಂದು ಇಡೀ ವಿಶ್ವಕ್ಕೆ ಪರಿಚಯ ಮಾಡಿಸಿದ್ದವರು ಅಟಲ್‌ಜೀ. ಅವರು ಅಣುಪರೀಕ್ಷೆ ನಡೆಸಿದಾಗ ಜಗತ್ತಿನ ಹಲವು ರಾಷ್ಟ್ರಗಳು ದೇಶಕ್ಕೆ ಬಹಿಷ್ಕಾರ ಹಾಕಿದ್ದವು. ಆದರೆ, ಅವರು ಅಂಜದೇ ಬಹಿಷ್ಕಾರವನ್ನು ಸಮರ್ಥವಾಗಿ ಎದುರಿಸಿದ್ದರು ಎಂದರು.

ಪ್ರಧಾನಿಯಾದ ಬಳಿಕ ರಾಷ್ಟ್ರದ ಅಭಿವೃದ್ಧಿಗೆ ಅತಿ ಅಗತ್ಯವಾದ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಪೂರ್ವಾಂಚಲದಿಂದ ಪಶ್ಚಿಮಾಂಚಲದವರೆಗೆ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದರು.

ಶಿಕ್ಷಣ ಎಲ್ಲರ ಹಕ್ಕು. ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಸರ್ವಶಿಕ್ಷಣ ಅಭಿಯಾನದಡಿ ಇಡೀ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ, ಅಂದು ಶಿಕ್ಷಣ ಕ್ರಾಂತಿ ಉಂಟುಮಾಡಿದರು. ಅಟಲ್‌ಜೀ ಯಾವುದೇ ಪಕ್ಷ ಇರಲಿ, ಎಲ್ಲ ನಾಯಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಶಕ್ತಿ, ಸೌಹಾರ್ದ ಮನೋಭಾವ ಹೊಂದಿದ್ದರು. ಹಾಗಾಗಿ ಅವರನ್ನು ಅಜಾತಶತ್ರು ಎಂದು ಜನರು ಕರೆಯುತ್ತಿದ್ದರು. ಅವರ ವ್ಯಕ್ತಿತ್ವವನ್ನು ಎಲ್ಲರೂ ಅನುಸರಿಸಬೇಕು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ವಾಜಪೇಯಿ ಅವರ ನೂರನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಸಂಘಟನೆ ಪರ್ವದ ಹಿನ್ನೆಲೆ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡುವುದಕ್ಕೆ ಪಕ್ಷ ಸೂಚನೆ ನೀಡಿದೆ. ನಮ್ಮ ಪಕ್ಷದಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಿಗೆ ಎಷ್ಟು ಗೌರವ ಇದೆಯೋ, ಅಷ್ಟೇ ಗೌರವವನ್ನು ಪ್ರತಿ ಬೂತ್ ಕಮಿಟಿ ಅಧ್ಯಕ್ಷರಿಗೂ ನೀಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದರು.

ಬಿಜೆಪಿ ಮುಖಂಡರಾದ ಇಂಚರ ಮಂಜುನಾಥ್, ಎಂ.ಎಸ್. ಪಾಲಾಕ್ಷಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್, ರಂಗನಾಥ್, ಮಾಜಿ ಉಪಾಧ್ಯಕ್ಷ ಸರಳಿಮನೆ ಮಂಜಪ್ಪ, ಮಹೇಶ್‌ ಹುಡೇದ್, ನೆಲಹೊನ್ನೆ ಮಂಜುನಾಥ್, ಟೈಲರ್ ರಾಜು, ಕುಮಾರ ಸ್ವಾಮಿ ಸೇರಿದಂತೆ ಅನೇಕರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

- - - -25ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದಲ್ಲಿ ಬುಧವಾರ ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಟಲ್‌ಜೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.