ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಇತ್ತೀಚಿನ ದಿನಗಳಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಹೆಸರು ದುರ್ಬಳಕೆಯಾಗುತ್ತಿದ್ದು, ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಹೇಳಿಕೆಯಿಂದ ದಸಂಸ ಜಾಗೃತರಾಗಬೇಕು ಎಂದು ಜಿಲ್ಲಾ ನಾಗರಿಕ ವೇದಿಕೆ ಸದಸ್ಯ ಪ್ರಭುಸ್ವಾಮಿ ಹೇಳಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ರಾಜಕಾರಣದ ಹಿಂದಿನ ಕುತಂತ್ರ ಎಂಬ ದುಂಡು ಮೇಜಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಶದಲ್ಲಿರುವ ಎಲ್ಲ ಪಕ್ಷಗಳು ಸಂವಿಧಾನ ಮತ್ತು ಅಂಬೇಡ್ಕರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಕಾಂಗ್ರೆಸ್ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದು, ಅಂಬೇಡ್ಕರ್ ಅವರ ಕಾಂಗ್ರೆಸ್ ದಲ್ಲಿದ್ದ ಕಾಲಘಟ್ಟದಲ್ಲಿ ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುವುದರ ಜತೆಗೆ ಅವರ ವಾದಗಳಿಗೆ ಮನ್ನಣೆ ನೀಡುತ್ತಿರಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರು ಕಾಂಗ್ರೆಸ್ ತ್ಯಜಿಸಿದರು ಎಂದು ಅವರು ತಿಳಿಸಿದರು.ಇತ್ತೀಚಿಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದು, ಇದು ಅತ್ಯಂತ ಖಂಡನೀಯ ಎಂದರು.ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಮಹದೇವಯ್ಯ, ದಸಂಸ ಮುಖಂಡ ಶಶಿಕಾಂತ್ ಮಾತನಾಡಿದರು.ದಸಂಸ ಜಿಲ್ಲಾ ಸಂಚಾಲಕ ಸೋಮಣ್ಣ, ಬಸವರಾಜು, ಮಹದೇವಸ್ವಾಮಿ, ಡಿಜೆಎಸ್ ಜಿಲ್ಲಾ ಸಂಚಾಲಕ ಮಂಜುನಾಥ್, ಶಿವಣ್ಣ, ಎಂ.ಆರ್. ಸುಂದರ, ಎಂ.ಕೆ. ಸಿದ್ದರಾಜು, ಮಾಜಿ ಅಧ್ಯಕ್ಷ ಎಸ್. ಪುಟ್ಟಸ್ವಾಮಿ, ಮಹೇಶ್, ಶಿವಮಲ್ಲು, ರಾಜಶೇಖರ್, ನಂಜುಂಡಯ್ಯ ಇದ್ದರು.