ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಕಾರ ಹುಣ್ಣಿಮೆಯನ್ನು ಎತ್ತುಗಳನ್ನು ಓಡಿಸಿ ಸಾಂಪ್ರದಾಯಿಕವಾಗಿ ಕರಿ ಕರಿಯುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಕಾರ ಹುಣ್ಣಿಮೆ ಪ್ರಯುಕ್ತ ರೈತರು ಎತ್ತು, ಕರು, ಆಕಳುಗಳಿಗೆ ಮೈ ತೊಳೆದು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಿ ಪೂಜೆ ಮಾಡಿ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು.

ಕರಿ ಹರಿಯುವ ಸ್ಥಳದಲ್ಲಿ ರೈತ ಬಾಂಧವರು, ಜನರು ಎತ್ತು- ಕರುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಓಡಿಸಿ ಕರಿ ಹರಿಯುವ ಸಂಪ್ರದಾಯ ನೆರವೇರಿಸಿದರು. ಈ ವೇಳೆ ಎತ್ತರಕ್ಕೆ ಕಟ್ಟಿರುವ ಬೇವಿನ ತಪ್ಪಲು, ಕೊಬ್ಬರಿ ಬಟ್ಟಲು, ಬಾಳೆಹಣ್ಣು ಪಡೆಯಲು ಮುಗಿಬಿದ್ದಿದ್ದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಗುರ್ಜಿ ಕಟ್ಟಿ ಹತ್ತಿರ ಮೊದಲು ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿದು ರೈತ ಬಾಂಧವರು ಸಂಭ್ರಮಿಸಿದರು. ಕರಿ ಹರಿದ ನಂತರ ಎತ್ತುಗಳನ್ನು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಬಸವೇಶ್ವರ ವೃತ್ತದ ಮೂಲಕ ಹಾಯ್ದು ರೈತರ ಮನೆಗೆ ಹೋದಾಗ ಆರತಿ ಮಾಡಿ ಮನೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ಡಂಬಳ, ಕಾಂತಪ್ಪ ರೆಡ್ಡರ, ವಿರೇಶ ಹಿರೇಮಠ, ಮಂಜು ಹಾರಿವಾಳ, ಸಂತೋಷ ಕೂಡಗಿ, ಅರವಿಂದ ಗೊಳಸಂಗಿ, ಬೀರಪ್ಪ ಪೂಜಾರ, ಸಿದ್ದು ಶೆಂಡೆ, ಮುತ್ತು ಪೂಜಾರಿ, ರಮೇಶ ಖ್ಯಾಡದ, ಚಂದ್ರಶೇಖರ ಗೊಳಸಂಗಿ ಇತರರು ಇದ್ದರು.


ಗಣಪತಿ ವೃತ್ತದಲ್ಲಿಯೂ ಕರಿ ಹರಿ ಕಾರ್ಯಕ್ರಮಕ್ಕೆ ಪಂಚಾಕ್ಷರಿ ಕಾಳಹಸ್ತೇಶ್ವರಮಠ ಎತ್ತುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಸಂಪ್ರದಾಯದಂತೆ ಗುಂಡು ಎತ್ತಿ ಮಳೆ-ಬೆಳೆ ಭವಿಷ್ಯ ಕೇಳಲಾಯಿತು. ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಪಂಚಾಕ್ಷರಿ ಕಾಳಹಸ್ತೇಶ್ವರಮಠ ಹೇಳಿದರು. ಸವರಾಜ ಹಾರಿವಾಳ, ಮಹಾಂತೇಶ ಹಂಜಗಿ ಮಾಂತೇಶ ಹೊಸಮನಿ, ಗೋಲಪ್ಪ ಜಾಡರ ,ಶ್ರೀಶೈಲ ಮುಳವಾಡ ,ಗುರಪ್ಪ ತುಂಬಗಿ, ಸುಭಾಸ ಹಡಪದ ಶ್ರೀಶೈಲ ಶಿರಗುಪ್ಪಿ ಸೇರಿದಂತೆ ಇತರರು ಇದ್ದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ನಗರದ ಯಲ್ಲಾಲಿಂಗ ದೇವಸ್ಥಾನದ ಮುಂಭಾಗ ಎತ್ತುಗಳನ್ನು ಓಡಿಸುವ ಮೂಲಕ ಕರಿ ಹರಿಯಲಾಯಿತು. ನಂತರ ಯಲ್ಲಾಲಿಂಗ ದೇವಸ್ಥಾನದ ಆವರಣದಲ್ಲಿ ಕಲ್ಲು-ಗುಂಡುಗಳನ್ನು ಎತ್ತಿ ಪ್ರದರ್ಶನ ಮಾಡಿದರು. ಕರಿ ಹರಿಯುವದನ್ನು ನೋಡಲು ಅಪಾರ ಸಂಖ್ಯೆಯ ಜನರು ಆಗಮಿಸಿದ್ದರು.