ಕನ್ನಡಪ್ರಭ ವಾರ್ತೆ ಬೆಳಗಾವಿ
ಗುರುದೇವ ಡಾ.ಆರ್.ಡಿ.ರಾನಡೆ ಅವರ ಚಿಂತನೆಗಳು ಕೇವಲ ತತ್ವಶಾಸ್ತ್ರದ ಪರಿಧಿಗೆ ಸೀಮಿತವಾಗಿಲ್ಲ. ಭಾರತೀಯ ಅನುಭವ ದರ್ಶನವನ್ನು ಆಧರಿಸಿ ವಿಶ್ವಮಾನವತೆಗೆ ದಿಕ್ಕು ತೋರಿಸುವ ಅಪರೂಪದ ಜ್ಞಾನಸಂಪತ್ತಾಗಿವೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.ನಗರದಲ್ಲಿ ಸೋಮವಾರ ಅಕಾಡೆಮಿ ಆಫ್ ಕಂಪ್ಯಾರೀಟಿವ್ ಫಿಲಾಸಫಿ ಅಂಡ್ ರಿಲಿಜನ್ ಆಯೋಜಿಸಿದ್ದ ಶತಮಾನೋತ್ಸವ ಸಮಾರೋಪ ಹಾಗೂ ಗುರುದೇವ ರಾನಡೆ ಅವರ ಸಮಗ್ರ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾನಡೆ ಅವರ ಸಮಗ್ರ ಕೃತಿಗಳ ಪ್ರಕಟಣೆ ಸಾಮಾನ್ಯ ಗ್ರಂಥ ಬಿಡುಗಡೆ ಕಾರ್ಯಕ್ರಮವಲ್ಲ. ಭಾರತದ ಸಾವಿರಾರು ವರ್ಷಗಳ ಜ್ಞಾನ ಪರಂಪರೆ, ಉಪನಿಷತ್ತುಗಳ ಚಿಂತನೆ, ಅನುಭವ ದರ್ಶನ ಮತ್ತು ಆಧ್ಯಾತ್ಮಿಕ ಸಾಧನೆಯ ಅಮೃತ ತತ್ವವನ್ನು ಮತ್ತೊಮ್ಮೆ ವಿಶ್ವದ ಮುಂದೆ ಪ್ರತಿಷ್ಠಾಪಿಸುವ ಐತಿಹಾಸಿಕ ಕಾರ್ಯ ಎಂದು ಶ್ಲಾಘಿಸಿದರು.ಭಾರತೀಯ ಉಪನಿಷತ್ತುಗಳನ್ನು ಮಾತ್ರ ನಂಬಬೇಡಿ, ಅರಿತುಕೊಳ್ಳಿ ಎಂಬ ಸಂದೇಶ ನೀಡುತ್ತವೆ. ಇದೇ ಸಂದೇಶ ಗುರುದೇವ ರಾನಡೆ ಅವರ ವಾಂಗ್ಮಯ ದಲ್ಲಿಯೂ ಅಡಕವಾಗಿದೆ. ಮನುಷ್ಯನನ್ನು ದೇವರ ಸನ್ನಿಧಿಯತ್ತ ಕರೆದೊಯ್ಯುವ ಜ್ಞಾನವೇ ಪರಿಪೂರ್ಣ ಜ್ಞಾನ ಎಂಬುದು ಅವರ ಚಿಂತನೆಯ ಸಾರ. ಭಾರತವು ಇಂದು ಸಾಂಸ್ಕೃತಿಕ ಪುನರ್ಜಾಗರಣದ ಹಾದಿಯಲ್ಲಿ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗುರುದೇವ ರಾನಡೆ ಅವರ ಸಮಗ್ರ ಕೃತಿಗಳ ಪ್ರಕಟಣೆ ಮತ್ತು ಡಿಜಿಟಲೀಕರಣವು ಭಾರತದ ಜ್ಞಾನ ಪರಂಪರೆಯನ್ನು ವಿಶ್ವದ ಮೂಲೆಮೂಲೆಗಳಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಅಕಾಡೆಮಿ ಶತಮಾನಪೂರ್ತಿ ಗುರುದೇವರ ಚಿಂತನೆಗಳನ್ನು ಜೀವಂತವಾಗಿಟ್ಟಿದೆ. ಈ ಸಮಗ್ರ ಕೃತಿಗಳ ಪ್ರಕಟಣೆ ಭಾರತ ಸಂಸ್ಕೃತಿ ಸಚಿವಾಲಯಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನ ಪರಂಪರೆ ವೇದಗಳಿಂದ ಆರಂಭವಾಗಿ ಉಪನಿಷತ್ತುಗಳು, ಭಗವದ್ಗೀತೆ, ಗೌತಮ ಬುದ್ಧ, ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ವಸಿಷ್ಠರು, ಜ್ಞಾನೇಶ್ವರರು, ಕಬೀರರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಹಾಗೂ ಗುರುದೇವ ರಾನಡೆ ಅವರವರೆಗೆ ನಿರಂತರವಾಗಿ ಹರಿದು ಬಂದಿದೆ. ಈ ಪರಂಪರೆಯನ್ನು ಅಸಂಖ್ಯಾತ ಋಷಿಗಳು, ಮುನಿಗಳು ಹಾಗೂ ತತ್ವಜ್ಞಾನಿಗಳು ತಮ್ಮ ಅನುಭವ ಮತ್ತು ಪ್ರಜ್ಞೆಯ ಮೂಲಕ ಪೋಷಿಸಿದ್ದಾರೆ ಎಂದು ಹೇಳಿದರು.ಈ ನಿರಂತರ ಜ್ಞಾನಧಾರೆಯೇ ಭಾರತೀಯ ನಾಗರಿಕತೆಯನ್ನು ಜೀವಂತವಾಗಿರಿಸಿದೆ. ನಮ್ಮ ಸಂಸ್ಕೃತಿಗೆ ನಿರಂತರತೆ, ಚೈತನ್ಯ ಮತ್ತು ಅನುಭವಸಂಪತ್ತನ್ನು ನೀಡಿದೆ. ಏಳಿ, ಎಚ್ಚರಗೊಳ್ಳಿ, ಗುರಿ ಸಾಧಿಸುವವರೆಗೆ ನಿರಂತರವಾಗಿ ಮುನ್ನಡೆಯಿರಿ ಎಂಬ ಸಂದೇಶ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ ಎಂದರು.
ಆರ್‌ಎಸ್‌ಎಸ್ ಮುಖಂಡ ಮಂಗೇಶ ಬಿಂಡೆ ಮಾತನಾಡಿ, ಸಮಾಜಕ್ಕಾಗಿ ಬದುಕಿದ ಮಹನೀಯರು ಮಾತ್ರ ಶಾಶ್ವತವಾಗಿ ಜನಮನದಲ್ಲಿ ಉಳಿಯುತ್ತಾರೆ ಎಂದು ವಿನಾಯಕ ದಾಮೋದರ ಸಾವರ್ಕರ್ ಅವರ ಉದಾಹರಣೆಯೊಂದಿಗೆ ಹೇಳಿದರು.
ಗುರುದೇವ ರಾನಡೆ ಅವರು ಭಾರತೀಯ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಚಿಂತಕರಾಗಿದ್ದು, ಆತ್ಮವಿಸ್ಮೃತಿ ಮತ್ತು ಕೀಳರಿಮೆಯಿಂದ ಬಳಲುತ್ತಿದ್ದ ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಲು ಅಪಾರ ಕೊಡುಗೆ ನೀಡಿದ್ದಾರೆ. ವ್ಯಕ್ತಿಯ ಅಂತರಂಗದಲ್ಲಿ ಪರಿವರ್ತನೆ ಸಂಭವಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂಬುದು ರಾನಡೆ ಅವರ ಸಂದೇಶವಾಗಿದೆ. ಯಶಸ್ಸಿನ ಜೊತೆಗೆ ಮೌಲ್ಯಗಳು, ತಂತ್ರಜ್ಞಾನದ ಜೊತೆಗೆ ಆತ್ಮಜ್ಞಾನವೂ ಅಗತ್ಯ ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ರಾನಡೆಯವರ ತತ್ವಗಳನ್ನು ಕೇವಲ ಓದುವುದಷ್ಟೇ ಅಲ್ಲದೇ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸು ಸಾಕಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ ಹಾಗೂ ದೀನದಯಾಳ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅತುಲ್ ಜೈನ್, ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ್ಯದ ಸಂಚಾಲಕ ಅರವಿಂದರಾವ್ ದೇಶಪಾಂಡೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಎಂ.ತ್ಯಾಗರಾಜ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆನಂದ ದೇಶಪಾಂಡೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುಕಾಂತ್ ಚಟ್ಪಲ್ಲಿ ಹಾಗೂ ಕರ್ನಾಟಕ ಕಾನೂನು ಸೊಸೈಟಿಯ ಸದಸ್ಯ ಕಾರ್ಯದರ್ಶಿ ಸುಧೀಂದ್ರ ಗಣಾಚಾರಿ ಮೊದಲಾದವರು ಉಪಸ್ಥಿತರಿದ್ದರು. ಅಕಾಡೆಮಿ ಗೌರವ ಕಾರ್ಯದರ್ಶಿ ಎಂ.ಬಿ.ಜಿರಲಿ ಸ್ವಾಗತಿಸಿದರು. ಅಕಾಡೆಮಿ ಅಧ್ಯಕ್ಷ ಅಶೋಕ ಪೋತದಾರ ವಂದಿಸಿದರು.------ಕೋಟ್‌ಭಾರತೀಯ ತತ್ವಶಾಸ್ತ್ರದ ಗುರಿ ಕೇವಲ ಚರ್ಚೆ ಅಥವಾ ತರ್ಕವಲ್ಲ, ಅನುಭವದ ಮೂಲಕ ಸತ್ಯವನ್ನು ಅರಿಯುವುದೇ ಅದರ ಮೂಲ ಆಶಯ. ಈ ಭಾರತೀಯ ಆತ್ಮವನ್ನು ಆಧುನಿಕ ಜಗತ್ತಿಗೆ ತಾರ್ಕಿಕ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಪರಿಚಯಿಸಿದ ಮಹಾನ್ ಚಿಂತಕರಲ್ಲಿ ಗುರುದೇವ ರಾನಡೆ ಪ್ರಮುಖರು. ಇಂದು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ, ಜೀನೋಮ್ ಅಧ್ಯಯನ ಹಾಗೂ ಅಂತರಿಕ್ಷ ಸಂಶೋಧನೆಗಳು ವೇಗವಾಗಿ ಬೆಳೆಯುತ್ತಿದ್ದರೂ, ಮನುಷ್ಯನು ತನ್ನನ್ನೇ ಅರಿತಿದ್ದಾನೆಯೇ? ಎಂಬ ಮೂಲಭೂತ ಪ್ರಶ್ನೆ ಇನ್ನೂ ಉಳಿದಿದೆ. ಇಂತಹ ಕಾಲಘಟ್ಟದಲ್ಲಿ ಆತ್ಮಬೋಧ, ಅನುಭವ ಮತ್ತು ತರ್ಕವನ್ನು ಸಮನ್ವಯಗೊಳಿಸಿದ ರಾನಡೆ ಅವರ ಚಿಂತನೆಗಳು ಇನ್ನಷ್ಟು ಪ್ರಸ್ತುತ.ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ