ಸಿದ್ಧಾರೂಢರ ಕಥಾಮೃತದ ಅದ್ಧೂರಿ ಶೋಭಾಯಾತ್ರೆ

| Published : Dec 30 2024, 01:01 AM IST

ಸಾರಾಂಶ

ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 85ನೇ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ, 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್ ನಿಮಿತ್ತ ಭಾನುವಾರ ಪಟ್ಟಣದ ಗೊಂಬಿಗುಡಿ ಈಶ್ವರ ಲಿಂಗ ದೇವಸ್ಥಾನದಿಂದ ಜಗದ್ಗುರು ಶ್ರೀ ಸಿದ್ಧಾರೂಢರ ಕಥಾಮೃತದ ಶೋಭಾಯಾತ್ರೆಗೆ ಅದ್ಧೂರಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸುಕ್ಷೇತ್ರ ಇಂಚಲಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 85ನೇ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ, 55ನೇ ವರ್ಷದ ಅಖಿಲ ಭಾರತ ವೇದಾಂತ ಪರಿಷತ್ ನಿಮಿತ್ತ ಭಾನುವಾರ ಪಟ್ಟಣದ ಗೊಂಬಿಗುಡಿ ಈಶ್ವರ ಲಿಂಗ ದೇವಸ್ಥಾನದಿಂದ ಜಗದ್ಗುರು ಶ್ರೀ ಸಿದ್ಧಾರೂಢರ ಕಥಾಮೃತದ ಶೋಭಾಯಾತ್ರೆಗೆ ಅದ್ಧೂರಿ ಚಾಲನೆ ದೊರೆಯಿತು.

ಪಟ್ಟಣದ ಗೊಂಬಿಗುಡಿಯ ಈಶ್ವರಲಿಂಗ ದೇವಸ್ಥಾನದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಮಹಾಮಂಡಲೇಶ್ವರರು, ಜಗದ್ಗುರುಗಳು,ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದರು.

ನಂತರ ಮಹಾಮಂಡಲೇಶ್ವರ, ಜಗದ್ಗುರುಗಳನ್ನು, ಮಠಾಧೀಶರನ್ನು 7 ಬೆಳ್ಳಿಯ ಸಾರೋಟದಲ್ಲಿ ಅಲಂಕರಿಸಿ ಸಹಸ್ರ ಪೂರ್ಣಕುಂಭೋತ್ಸವ, ಆನೆಯ ಮೇಲೆ ಸಿದ್ಧಾರೂಢರ ಮೂರ್ತಿಯನ್ನು ಅಲಂಕರಿಸಿ ಭವ್ಯ ಮೆರವಣಿಗೆ ಬಜಾರ ರಸ್ತೆಯ ಮೂಲಕ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗ ಮೂಲಕ ಶ್ರೀಮಠಕ್ಕೆ ಬಂದು ತಲುಪಿತು.

ಶ್ರೀಮಠಕ್ಕೆ ಆಗಮಿಸಿದ ಶೋಭಾಯಾತ್ರೆಯನ್ನು ಸಹಸ್ರಾರು ಸದ್ಭಕ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಉದ್ದಕ್ಕೂ ಸುಮಂಗಲೆಯರ ಸಹಸ್ರ ಪೂರ್ಣಮೇಳ, ವಿವಿಧ ಕಲಾತಂಡಗಳು ಭಾಗವಹಿಸಿ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು.

ದಾರಿಯುದ್ದಕ್ಕೂ ಭಕ್ತರಿಗೆ ನೀರು, ಅಂಬಲಿ, ಮಜ್ಜಿಗೆ ವಿತರಿಸಲಾಯಿತು. ಪಟ್ಟಣದ ಪ್ರಮುಖ ಬಜಾರ್ ರಸ್ತೆ ಕೇಸರಿ ಪರಪರಿ, ತಳಿರು ತೋರಣ, ಬಾಳೆಗಿಡ, ಕೇಸರಿ, ಬಿಳಿ, ಹಸಿರು ಬಣ್ಣಗಳ ಬಲೂನ್‌, ಶ್ರೀಗಳ ಬ್ಯಾನರ್ ಗಳು ರಾರಾಜಿಸಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಓಮ ನಮಃ ಶಿವಾಯ, ಶಿವಾನಂದ ಭಾರತಿ ಸ್ವಾಮೀಜಿಗಳಿಗೆ ಜೈ ಎಂಬ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.

ಸಾರೋಟದಲ್ಲಿ ಶ್ರೀಗಳು ಆಸೀನ:ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಬೀದರ ಶಿವಕುಮಾರೇಶ್ವರ ಸ್ವಾಮೀಜಿ, ಮುಂಬಯಿ ಹರಿದ್ವಾರದ ಮಹಾಮಂಡಲೇಶ್ವರ ದಿವ್ಯಾನಂದ ಪುರೀಜಿ ಮಹಾರಾಜ, ಹಂಪಿಯ ಹೇಮಕೂಟ ಡಾ.ವಿದ್ಯಾನಂದ ಭಾರತಿ ಸ್ವಾಮೀಜಿ, ಹೈದ್ರಾಬಾದ ಸಂಪೂರ್ಣಾನಂದಗಿರಿ ಸ್ವಾಮೀಜಿ, ಉತ್ತರಕಾಶಿ-ಮುಂಬೈನ ಸುಖದೇವಾನಂದಗಿರಿ ಮಹಾರಾಜ, ತಿರುಪತಿಯ ಸ್ವರೂಪಾನಂದಗಿರಿ ಸ್ವಾಮೀಜಿ, ದೇವರಹುಬ್ಬಳ್ಳಿಯ ಸಿದ್ದಶಿವಯೋಗಿಗಳು, ಕಲಬುರಗಿಯ ಮಾತೋಶ್ರೀ ಲಕ್ಷೀದೇವಿ, ರಾಣೆಬೆನ್ನೂರಿನ ಮಲ್ಲಯ್ಯ ಸ್ವಾಮೀಜಿ, ದಾವಣಗೆರೆಯ ಶಿವಾನಂದ ಸ್ವಾಮೀಜಿ, ಹುಬ್ಬಳ್ಳಿಯ ಸಚ್ಚಿದಾನಂದ ಸ್ವಾಮೀಜಿ, ಬೀದರ ಸಿದ್ದೇಶ್ವರಿ ಮಾತೋಶ್ರೀ, ತುಂಗಳ ಅನುಸುಯಾ ಮಾತೋಶ್ರೀ ಹಾಗೂ ನೂರಾರು ಪೂಜ್ಯರು ಸಾರೋಟದಲ್ಲಿ ಆಸೀನರಾಗಿದ್ದರು. ಶ್ರೀಮಠದ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಮಲ್ಲಾಪುರ ಮಠದ ಸಚ್ಚಿದಾನಂದ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ,ದೇವದುರ್ಗ ಶಾಸಕಿ ಜಿ.ಕರಿಯಮ್ಮ ನಾಯಕ್, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಸಮಾಜ ಸೇವಕ ನಾಗಪ್ಪ ಮೇಟಿ, ಉದ್ಯಮಿ ವಿಜಯ ಮೆಟಗುಡ್ಡ, ಶಿವಾನಂದ ಬೆಳಗಾವಿ, ಸೆದೆಪ್ಪ ವಾರಿ, ಸಿಪಿಐಗಳಾದ ಶಿವಾನಂದ ಗುಡಗನಟ್ಟಿ, ಬಸವರಾಜ ಕರವಿನಕೊಪ್ಪ,ದಾವಣಗೆರೆ ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮಾರಿಹಾಳ, ಗ್ರಾಪಂ ಅಧ್ಯಕ್ಷ ಶಂಕರ ಬಾಗೇವಾಡಿ ಸೇರಿದಂತೆ 25 ಸಾವಿರಕ್ಕೂ ಧಿಕ ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದರು.