ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿ ತಾಲೂಕಿಗೆ ಆಗಮಿಸಿದ ಐಪನಹಳ್ಳಿ ಬಿ.ನಾಗೇಂದ್ರಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತಿಸಿದರು.ತಾಲೂಕಿನ ಗಡಿಭಾಗ ಅಶೋಕನಗರದ ಬಳಿ ನೂರಾರು ಕಾರ್ಯಕರ್ತರು ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಪಟ್ಟಣದವರೆಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡರು ಪ್ರವಾಸಿ ಮಂದಿರ ವೃತ್ತದಲ್ಲಿ ನಾಗೇಂದ್ರಕುಮಾರ್ ಅವರನ್ನು ಹೆಗಲಮೇಲೆ ಹೊತ್ತು, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು.
ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಟಿಬಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಬಿ.ನಾಗೇಂದ್ರಕುಮಾರ್ ತಮ್ಮ ರಾಜಕೀಯ ಗುರುಗಳಾದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅನಂತರ ರಾಜ್ಯಸಭೆ ಮಾಜಿ ಸಭಾಪತಿ ಕೆ.ರೆಹಮಾನ್ ಖಾನ್ ವಾಸಕ್ಕೆ ಆಗಮಿಸಿ ಸಹೋದರ ಪುರಸಭಾ ಮಾಜಿ ಅಧ್ಯಕ್ಷ ಕೆ.ಗೌಸ್ ಖಾನ್ ಅವರಿಂದ ಅಭಿನಂದನೆ ಸ್ವೀಕರಿಸಿದರು.ನಂತರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಬಿ.ನಾಗೇಂದ್ರಕುಮಾರ್, 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ನನ್ನನ್ನು ಗುರುತಿಸಿ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ರಾಜ್ಯದ ಕೈಮಗ್ಗ ಇಲಾಖೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಕೈಮಗ್ಗ ವೃತ್ತಿ ಮಾಡುವವರ ಹಿತ ಕಾಯಲು, ಕೈಮಗ್ಗ ಉತ್ಪನ್ನಗಳು ಹಾಗೂ ಮಾರಾಟ ವ್ಯವಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಒಳ್ಳೆಯ ಹೆಸರು ತರಲು ಶಕ್ತಿಮೀರಿ ದುಡಿಯುತ್ತೇನೆ ಎಂದರು.ಈ ವೇಳೆ ತಾಲೂಕು ಕಾಂಗ್ರೆಸ್ ಉಸ್ತುವಾರಿ ಸಿ.ಆರ್.ರಮೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಪಂ ಮಾಜಿ ಸದಸ್ಯರಾದ ವಿ.ಮಂಜೇಗೌಡ, ಕಿಕ್ಕೇರಿ ಮಂಜುನಾಥ್, ಕಾಡಾ ನಿರ್ದೇಶಕ ರುಕ್ಮಾಂಗದ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್, ದರಖಾಸ್ತು ಕಮಿಟಿ ಸದಸ್ಯರಾದ ಬಸ್ತಿ ರಂಗಪ್ಪ, ಮಡುವಿನಕೋಡಿ ಕಾಂತರಾಜು, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಪಿಎಲ್ ಡಿ.ಬ್ಯಾಂಕ್ ನಿರ್ದೇಶಕ ಎಚ್.ಎ.ಕೃಷ್ಣೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಮಾ, ಲೋಲಾಕ್ಷಿ, ಶಿವಮ್ಮ, ಲತಾ, ಸೇರಿದಂತೆ ನೂರಾರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.