ಉತ್ತರ ಕನ್ನಡದಲ್ಲಿ 2025ರ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ

| Published : Jan 02 2025, 12:31 AM IST

ಸಾರಾಂಶ

ದಾಂಡೇಲಿ, ಜೋಯಿಡಾ ಭಾಗದಲ್ಲಿ ರೆಸಾರ್ಟ್‌ಗಳಲ್ಲಿ ಕೂಡಾ ಸಾಕಷ್ಟು ಜನರು ತಂಗಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರವಾರ: ಜಿಲ್ಲಾದ್ಯಂತ ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳಲಾಯಿತು. ಕಾರವಾರ, ಗೋಕರ್ಣ ತೀರಗಳು ಜನರಿಂದ ತುಂಬಿತ್ತು. ಮುರುಡೇಶ್ವರದ ಕಡಲ ತೀರದಲ್ಲಿ ಈ ಬಾರಿ ಮಂಗಳವಾರ ರಾತ್ರಿ ಹೊಸ ವರ್ಷಾಷರಣೆಗೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ.ಗೋಕರ್ಣದ ಓಂ, ಕುಡ್ಲೆ, ಮುಖ್ಯ ಕಡಲ ತೀರಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜನರ ಸಂಖ್ಯೆ ತುಸು ಕಡಿಮೆಯೇ ಇತ್ತು. ಈ ಭಾಗದ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಹೊಸವರ್ಷದ ಹಿನ್ನೆಲೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರವಾರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ದಾಖಲೆಯ ಪ್ರಮಾಣದಲ್ಲಿ ಜನರು ಸೇರಿದ್ದರು.

ಅಂದಾಜು ಮೂರುಸಾವಿರ ಜನರು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು. ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ತೀರಕ್ಕೆ ಆಗಮಿಸಿದ್ದು, ಕೆಲವರು ಮನೆಯಿಂದ ಊಟ ತಂದು ಸವಿದರೆ, ಇನ್ನು ಕೆಲವರು ತೀರದಲ್ಲಿಯೇ ಊಟವನ್ನು ಸಿದ್ಧಪಡಿಸಿಕೊಂಡು ಭೋಜನ ಮಾಡಿದರು.

ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಈ ಬಾರಿ ಸ್ಥಳೀಯರಲ್ಲದೇ ಬೇರೆ ಬೇರೆ ಭಾಗದಿಂದ ಪ್ರವಾಸಿಗರು ಆಗಮಿಸಿದ್ದರು. ನೆರೆಯ ಗೋವಾದಲ್ಲಿ ಕ್ರಿಸ್‌ಮಸ್, ಹೊಸವರ್ಷಾಚರಣೆಯ ಸಂಭ್ರಮ ಜೋರಾಗಿರುತ್ತದೆ. ತಿಂಗಳ ಮೊದಲೇ ರೆಸಾರ್ಟ್, ಹೋಮ್ ಸ್ಟೇ, ಲಾಡ್ಜ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಹೊಸ ವರ್ಷದ ಸಂದರ್ಭದಲ್ಲಿ ಆಗಮಿಸಿ ಕಡಲತೀರಗಳಲ್ಲಿ ಸಂಭ್ರಮಿಸುತ್ತಾರೆ.

ಈ ವೇಳೆ ಲಕ್ಷಾಂತರ ಜನರು ಸೇರುವುದರಿಂದ ಕೆಲವರು ಕುಟುಂಬಸ್ಥರೊಂಗೆ ಆಗಮಿಸುವವರು, ವಾಸ್ತವ್ಯಕ್ಕೆ ಅವಕಾಶ ಸಿಗದೇ ಇದ್ದವರು ಕಾರವಾರದತ್ತ ಮುಖ ಮಾಡಿದ್ದರು. ಕಾರಣ ಈ ಬಾರಿ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಟಾಗೋರ ಕಡಲತೀರದಲ್ಲಿ ಜನರು ಸೇರಿದಂತಾಗಿತ್ತು. ದಾಂಡೇಲಿ, ಜೋಯಿಡಾ ಭಾಗದಲ್ಲಿ ರೆಸಾರ್ಟ್‌ಗಳಲ್ಲಿ ಕೂಡಾ ಸಾಕಷ್ಟು ಜನರು ತಂಗಿದ್ದು, ಹೊಸ ವರ್ಷದ ಹಿನ್ನೆಲೆಯಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟಾರೆ ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ತುಸು ಜೋರಾಗಿಯೇ ಇತ್ತು.

ಮುರುಡೇಶ್ವರ ತೀರಕ್ಕೆ ಪ್ರವೇಶ ನಿಷೇಧಭಟ್ಕಳ ತಾಲೂಕಿನ ಪುರಾಣ ಪ್ರಸಿದ್ಧ ಮುರುಡೇಶ್ವರ ಕಡಲ ತೀರದಲ್ಲಿ ಹೊಸ ವರ್ಷಾಚರಣೆಗೆ ಮಂಗಳವಾರ ರಾತ್ರಿ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಸಾರ್ವಜನಿಕರು ಕಡಲ ತೀರಕ್ಕೆ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿತ್ತು. ಪ್ರತಿವರ್ಷವೂ ಪ್ರಮುಖವಾಗಿ ಮುರುಡೇಶ್ವರ, ಗೋಕರ್ಣಕ್ಕೆ ಹೊಸವರ್ಷ ಹಾಗೂ ಶಿವರಾತ್ರಿಯ ಸಂದರ್ಭದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ಎರಡೂ ಪುರಾಣಪ್ರಸಿದ್ಧ ಶಿವನ ತಾಣಗಳಾಗಿರುವುದರ ಜತೆಗೆ ಕಡಲ ತೀರವನ್ನು ಹೊಂದಿರುವುದರಿಂದ ರಾಜ್ಯವೊಂದೇ ಅಲ್ಲದೇ ಹೊರ ರಾಜ್ಯದಿಂದಲೂ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ. ಆದರೆ ೨೦೨೫ನೇ ವರ್ಷ ಸ್ವಾಗತಿಸಲು ಮುರುಡೇಶ್ವರ ಕಡಲ ತೀರದಲ್ಲಿ ಯಾರೂ ಇರಲಿಲ್ಲ.ಕಳೆದ ಕೆಲವು ದಿನದ ಹಿಂದೆ ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾದ ಹಿನ್ನೆಲೆಯಲ್ಲಿ ಕಡಲ ತೀರಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಿದ್ದು, ಇದರ ಭಾಗವಾಗಿ ಹೊಸ ವರ್ಷಾಚರಣೆಗೂ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತೇವೆ, ಬೆಳೆಸುತ್ತೇವೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಕೂಡಾ ಇಂತಹ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಡಲ ತೀರದಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡದೇ ಮೌನ ವಹಿಸಿದ್ದು, ಜನರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಪ್ರವಾಸೋದ್ಯಮ ಅಭಿವೃದ್ಧಿ ಇದೇನಾ ಎಂದು ಯೋಚಿಸುವಂತಾಗಿದೆ.