ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕ್ರೀಡೆಗಳು ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿವೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಕಾರ್ಯಾಕ್ರಮವನ್ನು ಧ್ವಜಾರೋಹಣದ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವವರನ್ನು ಒಂದೆಡೆಗೆ ಸೇರಿಸುವ ಮೂಲಕ ಏಕತೆಯ ಮನೋಭಾವ ಬೆಳೆಸುವ ಇಂತಹ ಕ್ರೀಡಾಕೂಟಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಭಾರತಕ್ಕೆ ಲಭಿಸಿರುವ ಪದಕಗಳ ಸಂಖ್ಯೆ ಕಡಿಮೆಯಾಗಿವೆ. ದೇಶದಲ್ಲಿ ಅಥ್ಲೆಟಿಕ್ಸ್ ಕ್ರೀಡೆಗಳನ್ನಾಡುವ ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶದ ಅಗತ್ಯವಿದೆ. ದೇಶದ ಪ್ರತಿಷ್ಠಿತ ಸಂಸ್ಥೆ ಮತ್ತು ವಿಶ್ವ ವಿದ್ಯಾನಿಲಯಗಳಿಗೆ ಸೀಮಿತವಾಗಿದ್ದ ಅಥ್ಲೆಟಿಕ್ಸ್ ಕ್ರೀಡೆಗಳು ಇಂದು ಎಲ್ಲಾ ಹಂದ ಶಾಲಾ ಕಾಲೇಜುಗಳಿಗೆ ವ್ಯಾಪಿಸಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೆಚ್ಚಿನ ಪದಕಗಳು ಲಭಿಸಲಿ ಎಂದು ಹಾರೈಸಿದರು .ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಾವು ಕೂಡ ಅಥ್ಲೆಟಿಕ್ಸ್ ಕ್ರೀಡಾಪಟುವಾಗಿ ಭಾಗವಹಿಸಿದ್ದ ಸಂರ್ಭ್ಗಳನ್ನು ಮೆಲುಕು ಹಾಕಿದ ಅವರು, ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಯ ಅಥ್ಲೆಟಿಕ್‌ಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಬಾಲ ಗುರುಮೂರ್ತಿ ಮಾತನಾಡಿ, ಮಾನವೀಯತೆ ಮತ್ತು ಸಂಬಂಧವನ್ನು ಕಟ್ಟುವ ಮೂಲಕ ಸಾಹಿತ್ಯ, ಸಂಗೀತ ಮತ್ತು ಕ್ರೀಡೆಗಳು ಮಾನವನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ. ಉತ್ತಮ ಕ್ರೀಡಾ ಪ್ರತಿಭೆಗಳನ್ನು ಶೋಧಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಿಂದ 3000 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು. ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ನಿರ್ದೇಶಕ ಸಿಂಧು ಬಿ. ರೂಪೇಶ, ಸಹಾಯಕ ನಿರ್ದೇಶಕ (ಕ್ರೀಡೆ) ಗುಬ್ಬಿಗೂಡು ರಮೇಶ, ಕೇಂದ್ರ ಕಚೇರಿ ಜಂಟಿ ನಿರ್ದೇಶಕ ಎಸ್. ಉಮೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್ ಸೇರಿದಂತೆ ಕ್ರೀಡಾ ಇಲಾಖೆ ಅಧಿಕಾರಿಗಳು, ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಉಪಸ್ಥಿತರಿದ್ದರು.