ಕಾನೂನು ಸೇವೆ ಪ್ರತಿಯೊಬ್ಬರ ಮನೆಬಾಗಿಲಿಗೂ ತಲುಪಲಿ: ನ್ಯಾ. ಗಣಪತಿ ಗುರುಸಿದ್ದ ಬಾದಾಮಿ

| Published : Nov 08 2024, 12:38 AM IST

ಸಾರಾಂಶ

ಅರೆಕಾಲಿಕ ಸ್ವಯಂ ಕಾನೂನು ಸೇವೆ ಸಲ್ಲಿಸಲು ನಿಮಗೆ ಒಳ್ಳೆಯ ಅವಕಾಶ ಲಬಿಸಿದ್ದು, ಅವಕಾಶ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಅರೆಕಾಲಿಕ ಸ್ವಯಂ ಕಾನೂನು ಸೇವಕರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಸಾಮಾನ್ಯ ಜನರು ಮತ್ತು ಕಾನೂನು ಸೇವಾ ಸಂಸ್ಥೆಗಳ ನಡುವಿನ ಅಂತರ ಕಡಿಮೆ ಮಾಡುವ ಮಧ್ಯವರ್ತಿಗಳಾಗಿ ಕಾರ್‍ಯನಿರ್ವಹಿಸಿ, ಕಾನೂನು ಸೇವೆಗಳ ಸಂಸ್ಥೆಗಳು ಜನರ ಸಮೀಪಿಸುವುದಕ್ಕಿಂತ ಹೆಚ್ಚಾಗಿ ಅವರ ಮನೆ ಬಾಗಿಲಿಗೆ ತಲುಪುವ ಗುರಿ ಹೊಂದಬೇಕೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.

ನಗರದ ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜಿನಿಂದ ಅರೆ ಕಾನೂನು ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನುಗಳು ಮತ್ತು ಇತರೆ ಕಲ್ಯಾಣ ಕ್ರಮಗಳು ಮತ್ತು ಶಾಸನಗಳಲ್ಲಿನ ಮೂಲಭೂತ ಜ್ಞಾನದೊಂದಿಗೆ ಪ್ಯಾರಾ ಲೀಗಲ್ ಸ್ವಯಂಸೇವಕರು ತಕ್ಷಣ ಕಾನೂನಿನ ನೆರವು ಬಯಸುವವರಿಗೆ ಸಹಾಯ ಮಾಡಲು ಸಾಧ್ಯ, ಇದರಿಂದ ಒಬ್ಬ ವ್ಯಕ್ತಿ ತನ್ನ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಹಿರಿಯ ನ್ಯಾಯಧೀಶರಾದ ಮುಜಫರ್ ಎ.ಮಾಂಜರಿ ಮಾತನಾಡಿ, ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆ ಒದಗಿಸಲು ಮತ್ತು ವಿವಾದಗಳ ಸೌಹಾರ್ದಯುತ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗಳನ್ನು ಆಯೋಜಿಸಲು ಅರೆಕಾಲಿಕ ಸ್ವಯಂ ಕಾನೂನು ಸೇವಕರ ಕಾರ್‍ಯ ತುಂಬ ಮಹತ್ವ ಪಡೆದುಕೊಂಡಿದೆ, ಅರೆಕಾಲಿಕ ಸ್ವಯಂ ಕಾರ್‍ಯಕರ್ತರಿಗೆ ನೀಡಿರುವ ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಉಚಿತವಾಗಿ ಕಾನೂನು ಸೇವೆ ಮಾಡಬೇಕಿದೆ, ಸ್ವಯಂ ಅರೆಕಾಲಿಕ ಸೇವಕರಾಗಿ ನೇಮಕಾತಿ ಹೊಂದಿರುವ ಎಲ್ಲರಿಗೂ ಧನ್ಯವಾದ ತಿಳಿಸಿ, ಯಾವುದೇ ಲೋಪದೋಷಗಳು ಇಲ್ಲದಂತೆ ಸ್ವಯಂ ಅರೆಕಾಲಿಕ ಕಾನೂನು ಸೇವಕರು ಕಾರ್‍ಯನಿರ್ವಹಿಸಿ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಿಬೇಕು, ಕಾನೂನು ಸೇವೆಗಳು ನಿಮಗೆ ನೀಡಿರುವ ಗುರುತಿನ ಚೀಟಿ ಇಟ್ಟುಕೊಂಡು ಯಾವುದೇ ಹಣವನ್ನು ವಸೂಲಿ ಮಾಡುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್ ಕುಮಾರ್ ಮಾತನಾಡಿ, ಅರೆಕಾಲಿಕ ಸ್ವಯಂ ಕಾನೂನು ಸೇವಕರಾಗಿ ಅಯ್ಕೆಯಾಗಿರುವವರು ಕಾನೂನು ವ್ಯಾಪ್ತಿಯಲ್ಲಿ ನಿಮ್ಮ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸಿಕೊಳ್ಳಿ, ಸಾಮಾನ್ಯ ಜನರ ಬಳಿ ಹೋಗಲು ನಿಮಗೆ ಇದು ಒಳ್ಳೆಯ ಅವಕಾಶ. ಇದರ ಜೊತೆಗೆ ನಿಮಗೆ ಕಾನೂನು ಜ್ಞಾನವೂ ಸಿಗಲಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಿಮಗೆ ಸಹಕಾರಿಯಾಗಲಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಅರೆಕಾಲಿಕ ಸ್ವಯಂ ಕಾನೂನು ಸೇವೆ ಸಲ್ಲಿಸಲು ನಿಮಗೆ ಒಳ್ಳೆಯ ಅವಕಾಶ ಲಬಿಸಿದ್ದು, ಅವಕಾಶ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಅರೆಕಾಲಿಕ ಸ್ವಯಂ ಕಾನೂನು ಸೇವಕರಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯೋಸ್ ಮಾತನಾಡಿದರು. ಒಂದು ದಿನದ ಕಾರ್ಯಾಗಾರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್‌. ಹೊಸಮುನಿ ಅರೆಕಾಲಿಕ ಸ್ವಯಂ ಕಾನೂನು ಸೇವಕರಿಗೆ ತರಬೇತಿ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ವಕೀಲರಾದ ಕಲೈಸೆಲ್ವಿ, ಮಘೇಂದ್ರನ್ ಇದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಪ್ರಸನ್ನಕುಮಾರ್ ಸ್ವಾಗತಿಸಿ ವಂದಿಸಿದರು.