ಹೊಸಕೊಪ್ಪದ ಕೃಷಿಕ ಯತಿರಾಜ್ ತೋಟದ ಬಳಿ ಪತ್ತೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕುಸುಬೂರು ಗ್ರಾಮದ ಹೊಸಕೊಪ್ಪದ ಕೃಷಿಕ ಯತಿರಾಜ್ ತೋಟದ ಪಕ್ಕದ ಕೆರೆಗೆ 10 ಕಾಡಾನೆಗಳ ಹಿಂಡು ಭಾನುವಾರ ಮಧ್ಯಾಹ್ನ 12 ಗಂಟೆಗೆ ಬಂದು ನೀರು ಕುಡಿದು ಸ್ವಲ್ಪ ಹೊತ್ತು ನೀರಿನಲ್ಲೇ ಆಟವಾಡಿಕೊಂಡು ಹೋಗಿದೆ.
ಹೊಸಕೊಪ್ಪದ ಕೃಷಿಕ ಕಾಡಾನೆಗಳ ದಾಳಿ ತಡೆಯಲು ತಮ್ಮ ತೋಟಕ್ಕೆ ಬಳಿ ಮಾಡಿರುವ ಐಬೆಕ್ಸ್ ಬೇಲಿ ದುರಸ್ತಿಗಾಗಿ ತೋಟಕ್ಕೆ ಬಂದಾಗ ಬೇಲಿ ಪಕ್ಕದ ದೊಡ್ಡ ಕೆರೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿದೆ. ಇನ್ನೂ ಸ್ವಲ್ಪ ದೂರದಲ್ಲಿ 8 ಕಾಡಾನೆ ಗಳ ಮತ್ತೊಂದು ಹಿಂಡು ಬಿದಿರು ಮುರಿಯುತ್ತಿರುವ ದೃಶ್ಯ ಕಂಡಿದೆ. ಕಳೆದ 1 ವಾರದಿಂದಲೂ ಕುಸುಬೂರು ಕಾಲೋನಿ, ಹೊಸ ಕೊಪ್ಪ, ಸಾತ್ಕೋಳಿ, ಆರಂಬಳ್ಳಿ- ಎಕ್ಕಡಬೈಲು ಭಾಗದಲ್ಲಿ 3 ಕಾಡಾನೆಗಳ ಹಿಂಡು ಸುತ್ತಾಡುತ್ತಿವೆ. 1 ಹಿಂಡಿನಲ್ಲಿ 10 ಕಾಡಾನೆ, ಮತ್ತೊಂಡು ಹಿಂಡಿನಲ್ಲಿ 8 ಕಾಡಾನೆ ಹಾಗೂ 1 ಒಂಟಿ ಆನೆ ಇವೆ.ಎಲಿಫೆಂಟ್ ಟಾಸ್ಕ್ ಪೋರ್ಸ್ ಹಾಗೂ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಓಡಿಸಿದರೆ ಮತ್ತೊಂಡು ಕಾಡಿಗೆ ಹೋಗುತ್ತಿವೆ. ಈ 5 ಹಳ್ಳಿಗಳಲ್ಲಿ ಹೆಚ್ಚಾಗಿ ಬಿದಿರು ಇರುವುದೇ ಇಲ್ಲಿ ಸುತ್ತಾಡಲು ಕಾರಣವಾಗಿರಬಹುದು. ಈ 5 ಹಳ್ಳಿಗಳಲ್ಲಿ ಪ್ರಾರಂಭದಲ್ಲಿ ರಾತ್ರಿ ಹೊತ್ತು ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರು ಭಯಪಡುತ್ತಿದ್ದರು. ಈಗ ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
-- ಬಾಕ್ಸ್--
ಹೊಸಕೊಪ್ಪ ಕೃಷಿಕ ಯತಿರಾಜ್ ಕನ್ನಡ ಪ್ರಭದೊಂದಿಗೆ ಮಾತನಾಡಿ, ಕಳೆದ 1 ವಾರದಿಂದ ಕಾಡಾನೆಗಳು ಹಿಂಡು ಕಾಡಿನಲ್ಲಿ ಇರುವುದಕ್ಕಿಂತ ರಸ್ತೆ ಬದಿಯಲ್ಲೇ ಜಾಸ್ತಿ ಕಾಣಿಸುತ್ತಿದೆ. ಕಾಡಿನಲ್ಲಿ ಆನೆಗೆ ಆಹಾರ ಕಡಿಮೆಯಾಗಿದೆ. ರಸ್ತೆ ಬದಿಯಲ್ಲಿ ಬಿದಿರು ಹಿಂಡು ತಿನ್ನಲು ಬರುತ್ತಿವೆ. ಕಳೆದ 2 ದಿನದ ಹಿಂದೆ ಕಾಡಾನೆ ಓಡಿಸಲು ಪಟಾಕಿ ಸಿಡಿಸಿದ್ದೇವೆ. ರಸ್ತೆಯ ಬದಿ ಬಿದಿರು ತೆಗೆಸಿದರೆ ಕಾಡಾನೆಗಳು ಬರುವುದು ಕಡಿಮೆಯಾಗಬಹುದು. ಮುಖ್ಯವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.