ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಾಲೇಜಿನ ಹಣಕಾಸು ವ್ಯವಹಾರದಲ್ಲಿ ಭಾರಿ ಲೋಪಗಳು ಆಗಿರುವ ಆರೋಪಗಳ ತನಿಖೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚಿಸಿದರು.ಅವರು ಬ್ರೈಮ್ಸ್ ಭೇಟಿಯ ಸಂರ್ಭರ ಅಧಿಕಾರಿಗಳ ಸಭೆಯಲ್ಲಿ ಹಣದ ವಹಿವಾಟು, ಬಿಲ್ ಪಾವತಿ ಮತ್ತಿತರ ವಿಷಯಗಳಲ್ಲಿ ಕಳೆದ 5 ವರ್ಷಗಳಲ್ಲಿ ಭಾರಿ ಅಕ್ರಮ ಆಗಿದೆ ಎಂಬ ದೂರುಗಳಿದ್ದು ಅವುಗಳ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕರ್ಯಿರ್ಶಿಆ ಮಹಮ್ಮದ್ ಮೊಹಸಿನ್ ಅವರಿಗೆ ಸೂಚಿಸಿದರು.
ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರ ಹಾಗೂ ಸಿಬ್ಬಂದಿಗಳ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಇಂದಿಲ್ಲಿ ಭರವಸೆ ನೀಡಿದರು.ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಭಾಗ ಸೇರಿದಂತೆ ಬೀದರ ಜಿಲ್ಲೆಯ ಎಲ್ಲ ರೋಗಿಗಳಿಗೆ ಅನುಕೂಲವಾಗಿರುವ ಬ್ರಿಮ್ಸ್ನ ಸಮಗ್ರ ಅಭಿವೃದ್ಧಿಗೆ ಹಾಗೂ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
150 ಪದವಿ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ಸೀಟಗಳ ಹೆಚ್ಚಳ, ಕಟ್ಟಡದ ಸ್ಥಿತಿಗತಿ, ಅಗತ್ಯ ಉಪಕರಣಗಳು, ಸಿಬ್ಬಂದಿ ವೇತನ, ಸ್ವಚ್ಛತೆ ಹಾಗೂ ಹಣಕಾಸಿನ ವ್ಯವಹಾರ ಕುರಿತು ಮಾಹಿತಿಯನ್ನು ಸಚಿವರು ಪಡೆದರು. ಖಾಲಿಯಿರುವ ತಜ್ಞ ವೈದ್ಯರ ಹುದ್ದೆಗೆ ಡಿಪಿಸಿ ಪ್ರಸ್ತಾವನೆ ಕಳಿಸಿ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸದರು.ಕಳೆದ ಹಲವಾರು ತಿಂಗಳುಗಳಿಂದ ಬಾಕಿಯಿರುವ ಹೊರಗುತ್ತಿಗೆ ವೈದ್ಯರ ಹಾಗೂ ಇತೆ ಸಿಬ್ಬಂದಿಗಳ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ವರ್ಷ 7 ಕೋಟಿ ರು. ವೇತನ ಅನುದಾನ ಬಂದಿರುವ ಬಗ್ಗೆ ಹಾಗೂ ಇನ್ನು 4.5 ಕೋಟಿ ರು. ವೇತನ ಅನುದಾನ ಅಗತ್ಯವಿರುವ ಬಗ್ಗೆ ಬ್ರಿಮ್ಸ್ ನಿರ್ದೇಶಕಿ ಡಾ..ಶಾಂತಲಾ ಕೌಜಲಗಿ ಮಾಹಿತಿ ನೀಡಿದರು. ಖಾಲಿಯಿರುವ ಎಲ್ಲ ಹುದ್ದೆಗಳ ಭರ್ತಿಗೆ ಪ್ರಸ್ತಾವನೆಯನ್ನು ಸಿದ್ದುಗೊಳಿಸುವಂತೆ ಸಭೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್ ಅವರಿಗೆ ಸಚಿವರು ತಿಳಿಸಿದರು.ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ, ರಹೀಂ ಖಾನ್ ಮತ್ತಿತರರು ಇದ್ದರು.ಉತ್ತಮ ಆರೋಗ್ಯಸೇವೆ ನೀಡುವಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚು: ಖಂಡ್ರೆ
ಬೀದರ್: ಬ್ರಿಮ್ಸ್‌ನ ಹೆಚ್ಚಿನ ಸುಧಾರಣೆ, ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ವೈದ್ಯಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ನುಡಿದರು.ಬ್ರಿಮ್ಸನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸಹಭಾಗಿತ್ವ ಜವಾಬ್ದಾರಿ (ಸಿಎಸ್‌ಆರ್) ಹಾಗೂ ಕೆಕೆಆರ್‌ಡಿಬಿ ಅನುದಾನದಡಿ ಬ್ರಿಮ್ಸ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು ಪ್ರತಿದಿನ ಸ್ವಚ್ಛತೆ ಕಾಪಾಡುವಂತೆ ಸೂಚಿಸದರು.ಕಟ್ಟಡವು ಅಲ್ಲಲ್ಲಿ ಸೋರುತ್ತಿರುವ ಬಗ್ಗೆ ಗಮನಿಸಿದ ಸಚಿವರು ಲೋಕೋಪಯೋಗಿ ಇಲಾಖೆಯಿಂದ ತಕ್ಷಣವೇ ದುರಸ್ತಿ ಮಾಡುವಂತೆ ಇಇ ಶಿವಶಂಕರ ಅವರಿಗೆ ಸೂಚಿಸಿದರು. ಶೌಚಾಲಯ ನವೀಕರಣಗೊಳ್ಳುವಂತೆ ಹಾಗೂ ಆಧುನಿಕ ಪೈಪಲೈನ ಅಳವಡಿಸುವಂತೆ ತಿಳಿಸಿದರು. ಬ್ರಿಮ್ಸ್ನಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಡುವಂತೆ ತಿಳಿಸಲಾಯಿತು. ಅಗತ್ಯ ಉಪಕರಣಗಳನ್ನು ಕೆಕೆಆರ್‌ಡಿಬಿ ಅನುದಾನದಡಿ ತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಆವರಣದಲ್ಲಿ ಭದ್ರತೆ ಹೆಚ್ಚಿಸುವಂತೆ ಹಾಗೂ ಸುರಕ್ಷತೆಗಾಗಿ ಮಹಿಳಾ ಕಾನ್ಸಟೇಬಲ್ ನೇಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ತಜ್ಞವೈದ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.ಬ್ರಿಮ್ಸ್ ದುರವಸ್ಥೆ: ತಿಂಗಳ ಬಳಿಕ ಸಚಿವರ ಭೇಟಿ
ಬೀದರ್: ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯ ನೆಲ ಮಹಡಿಯಲ್ಲಿ ನೀರು ತುಂಬಿಕೊಂಡು ಸಂಪೂರ್ಣ ವಿದ್ಯುತ್ ಕಡಿತಗೊಂಡು, ಐಸಿಯುನಲ್ಲಿದ್ದ ರೋಗಿಗಳು ಆಕ್ಸಿಜನ್ ಕೊರತೆಯಿಂದ ನರಳಿದ್ದ ಘಟನೆ ನಡೆದು ಹಲವು ತಿಂಗಳುಗಳೇ ಆಗಿವೆ. ನಂತರ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಾದರೂ ಪರಿಸ್ಥಿತಿ ಬದಲಾಗಿರಲಿಲ್ಲ.ಆಸ್ಪತ್ರೆಯ ದುರಾವಸ್ಥೆಯ ಬಗ್ಗೆ ಇದೀಗ ಎಚ್ಚೆತ್ತುಕೊಂಡ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ಬ್ರಿಮ್ಸ್‌ಗೆ ಭೇಟಿ ನೀಡಿ ಪರಿಸ್ಥಿತಿಯ ದುರಾವಸ್ಥೆ ಅವಲೋಕಿಸಿ ಕಿಡಿಕಿಡಿಯಾದರು. ಇದಕ್ಕೆಲ್ಲ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ದಶಕದ ಹಿಂದಿನ ಕಾಮಗಾರಿಯನ್ನು ದೂಷಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರೊಂದಿಗೆ ಕಟ್ಟಡದ ನೆಲ ಮಹಡಿ ಪರಿಶೀಲಿಸಿದರು. ಆಗಲೂ ನೆಲಮಹಡಿಯಲ್ಲಿ ನೀರಿನ ಬುಗ್ಗೆ ಹೊರಬರುತ್ತಿರುವುದು ಕಣ್ಣಿಗೆ ಬಿತ್ತು. ಕಟ್ಟಡದ ಕಳಪೆ ಕಾಮಗಾರಿ ಕಂಡು ಸಂಬಂಧಪಟ್ಟವರ ವಿರುದ್ದ ಕಿಡಿ ಕಾರಿದರಲ್ಲದೇ ಶೀಘ್ರವೇ ತಜ್ಞರ ಮೂಲಕ ಕಾಮಗಾರಿ ಸರಿಯಾಗಿ ಮಾಡಿಸಿ ಎಂದು ಸೂಚಿಸಿದರು.
ಸಚಿವರು ಭೇಟಿ ನೀಡಿದಾಗಲೂ ನೆಲ ಮಹಡಿಯ ಎಲ್ಲೆಡೆ ನೀರು ಹರಿಯುತ್ತಿದ್ದವು ಅಷ್ಟಕ್ಕೂ ಸಚಿವರು ಬರುವುದನ್ನು ಮನಗಂಡು ಸ್ವಚ್ಛ ಮಾಡಿಸಿದ್ದರೂ ಅಲ್ಲಲ್ಲಿ ನೀರು ನಿಂತಿದ್ದವು.ಆಸ್ಪತ್ರೆಯ 6ನೇ ಮಹಡಿಯಲ್ಲಿರುವ ಮಕ್ಕಳ ತುರ್ತು ಚಿಕಿತ್ಸಾ ಘಟಕ, ಐಸಿಸಿಯು, ಐಎನ್ಸಿಯು ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಚಿಕಿತ್ಸೆ ಕುರಿತು ಏನಾದರೂ ಸಮಸ್ಯೆ ಇದೆಯಾ ಎಂದು ರೋಗಿಗಳ ಸಂಬಂಧಿಕರಿಗೆ ಕೇಳಿ ಪರಿಶೀಲಿಸಿದರು.ನಂತರ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ಯಾಥಲಾಬ್ ಘಟಕಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿ ಇನ್ನು ವರೆಗೆ ಯಾವುದೇ ಯಂತ್ರ ಇಲ್ಲ. ಅಲ್ಲಿ ಕೇವಲ ಕಟ್ಟಡದ ಕೆಲಸಗಳು ಮಾತ್ರ ನಡೆಯುತ್ತಿದ್ದವು.ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ಬದೋಲೆ, ಆಸ್ಪತ್ರೆಯ ಮುಖ್ಯಸ್ಥರು ಮತ್ತಿತರರು ಇದ್ದರು.