ಸಾರಾಂಶ
ಶಿರಸಿ: ಶರನ್ನವರಾತ್ರಿ ಉತ್ಸವದ ಅಂಗವಾಗಿ ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಬ್ರಾಹ್ಮೀಮುಹೂರ್ತದಲ್ಲಿ ಮತ್ತು ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾಯಂಕಾಲ ಶ್ರೀಚಕ್ರಾರ್ಚನೆಯನ್ನು ಹಾಗೂ ಶ್ರೀದೇವಿಯ ಮತ್ತು ಶಾರದಾ ಪೂಜೆಗೈದರು.
ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ದೇವಿ ಭಾಗವತ, ಅಧ್ಯಾತ್ಮ ರಾಮಾಯಣ, ಪುರಾಣ, ಶತರುದ್ರ, ಬ್ರಹ್ಮಾಸ್ತ್ರ ಜಪ, ಚಂಡಿ ಪಾರಾಯಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೈದಿಕರಿಂದ ನೆರವೇರಿದವು. ಶ್ರೀ ರಾಮಕ್ಷತ್ರಿಯ ಶಿಷ್ಯರು ಹಾಗೂ ವೈಯಕ್ತಿಕ ಸೇವಾಕರ್ತರು ಪಾಲ್ಗೊಂಡು ಶ್ರೀ ದೇವಿಯ ಸನ್ನಿಧಿಯಲ್ಲಿ ಸೇವೆಯನ್ನು ಸಲ್ಲಿಸಿ, ಶ್ರೀಗಳವರಿಂದ ತೀರ್ಥ, ಆಶೀರ್ವಾದ ಮಂತ್ರಾಕ್ಷತೆ ಪಡೆದರು.ಸಾಯಂಕಾಲ ನಡೆದ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರೀ ಯುವಕ-ಯುವತಿ ಮಂಡಳ ಅವರಿಂದ ಭಜನೆ, ರಾಧಾ ದೇಸಾಯಿ ಧಾರವಾಡ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನೆರವೇರಿತು. ಪ್ರಕಾಶ ಹೆಗಡೆ ಯಡಳ್ಳಿ ಹಾರ್ಮೋನಿಯಂ ಮತ್ತು ಗುರುರಾಜ ಆಡುಕಳ ತಬಲಾದಲ್ಲಿ ಸಹಕರಿಸಿದರು. ಬೆಂಗಳೂರಿನ ಗಣೇಶ ನೃತ್ಯಾಲಯದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಲಾವಿದರಿಗೆ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಸುವರ್ಣಮಂತ್ರಾಕ್ಷತೆ ನೀಡಲಾಯಿತು. ಆರ್.ಎನ್. ಭಟ್ ಸುಗಾವಿ ಕಾರ್ಯಕ್ರಮ ನಿರ್ವಹಿಸಿದರು.
ಮಾರಿಕಾಂಬಾ ದೇವಿಯ ದರ್ಶನಕ್ಕೆ 6 ನೇ ದಿನವೂ ಜನಸಾಗರ:ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯುತ್ತಿದ್ದು, ಭಕ್ತಗಣದ ಆಗಮನ 6ನೇ ದಿನವಾದ ಶನಿವಾರವೂ ಮುಂದುವರಿದಿದೆ.ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿ ತೆರಳಿದರು.ಇನ್ನು 1ರಿಂದ 4ನೇ ವರ್ಗದವರ ವಿಭಾಗ ಮತ್ತು 5ರಿಂದ 7ನೇ ವರ್ಗ ಮತ್ತು 8ರಿಂದ 10ನೇ ವರ್ಗದವರ ವಿಭಾಗದವರಿಗೆ ಧ್ಯಾನಮಾಲಿಕೆ ಸ್ಪರ್ಧೆ ನಡೆಯಿತು. ಸಂಜೆ 8ರಿಂದ 10ನೇ ವರ್ಗದ ವಿಭಾಗದವರಿಗೆ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾತ್ರಿ ಬೆಂಗಳೂರಿನ ಡಾ. ಸುಮಿತ್ರಾನಂದ ಅವರಿಂದ ಕೀರ್ತನೆ ಕಾರ್ಯಕ್ರಮ ನಡೆಯಿತು. ಮಹೇಶ ಭಟ್ಟ ದಾಯಿಮನೆ ಹಾರ್ಮೊನೀಯಂ, ಮೃದಂಗದಲ್ಲಿ ನಿತ್ಯಾನಂದ ತುಮಕೂರು ಸಾಥ್ ನೀಡಿದರು.
ಇಂದಿನ ಸ್ಪರ್ಧೆ:ಸೆ. 28ರಂದು ಬೆಳಗ್ಗೆ 9ಕ್ಕೆ ಕಲ್ಯಾಣಮಂಟಪದ ಮೇಢಲಿನ ಹಾಲ್‌ನಲ್ಲಿ ಚದುರಂಗ ಸ್ಪರ್ಧೆ, ದೇವಾಲಯದ ಆಫೀಸಿನ ಮಹಡಿಯ ಮೇಲಿನ ಹಾಲ್‌ನಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆ ಸ್ಪರ್ಧೆ ಮತ್ತು ಸಭಾ ಮಂಟಪದಲ್ಲಿ ಬೆಳಗ್ಗೆ 10ರಿಂದ ಬೆಂಗಳೂರಿನ ನರ್ತನ ಅಕಾಡೆಮಿ ಆಫ್ ಪರಫಾರ್ಮಿಂಗ್ ಅರ್ಟ್ ಇವರಿಂದ ಭರತನಾಟ್ಯ, ಧಾರವಾಡದ ಬಸವರಾಜ ವಂದಲಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ ಅಂಗನವಾಡಿ ನೃತ್ಯ ವಿಭಾಗದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಜೆ ಕೀರ್ತನೆ ಕಾರ್ಯಕ್ರಮ ಆಯೋಜಿಸಲಾಗಿದೆ.