ಸಾರಾಂಶ
ಮೂರ್ತಿ ಪೂಜೆ ಮಾಡುವ ಅವಶ್ಯಕತೆಯಿಲ್ಲ ಎಂದ ಬಸವಣ್ಣನವರು, ಸರ್ವ ಜನಾಂಗಕ್ಕೂ ಶಾಂತಿಯ ತೋಟವಾಗಿದ್ದರು
ಹರಪನಹಳ್ಳಿ: ಅಂಬೇಡ್ಕರ್ ಸಂವಿಧಾನ ನೀಡಿದರೆ ಜಗಜ್ಯೋತಿ ಬಸವಣ್ಣ ಇಡೀ ವಿಶ್ವಕ್ಕೆ ಏಳು ವಾಕ್ಯಗಳಲ್ಲಿ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದು ಕನ್ನಡ ಚಲನಚಿತ್ರದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಅವರು ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಲಿಂ.ಚನ್ನಬಸವ ಮಹಾ ಶಿವಯೋಗಿಗಳ 19ನೇ ವರ್ಷದ ಪುಣ್ಯಸ್ಮರಣೆ ಹಾಗೂ ಬಸವತತ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಮೂರ್ತಿ ಪೂಜೆ ಮಾಡುವ ಅವಶ್ಯಕತೆಯಿಲ್ಲ ಎಂದ ಬಸವಣ್ಣನವರು, ಸರ್ವ ಜನಾಂಗಕ್ಕೂ ಶಾಂತಿಯ ತೋಟವಾಗಿದ್ದರು ಎಂದು ನುಡಿದರು.
ಬಸವಣ್ಣನವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವರು ವಿಶ್ವ ಮಾನವರು, ಸಾಮಾಜಿಕ ಚಿಂತಕ, ರಾಜಕೀಯ ಮುತ್ಸದ್ಧಿಯಾಗಿದ್ದರು. ಬಸವಣ್ಣನವರು ಹೇಳಿದಂತೆ ಇಷ್ಟಲಿಂಗ ಪೂಜೆ ಮಾಡಿ ಎಂದು ಅವರು ತಿಳಿಸಿದರು.ಕಮ್ಮತ್ತಹಳ್ಳಿ ಗ್ರಾಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿರುವುದನ್ನು ನೋಡಿದರೆ ಅನುಭವ ಮಂಟಪವೇ ಇಲ್ಲಿದೆ, ನೋಡಲು ತುಂಬ ಚನ್ನಾಗಿದೆ ಎಂದು ಹೇಳಿದರು.
ಕಮ್ಮತ್ತಹಳ್ಳಿ, ಪಾಂಡೋಮಟ್ಟಿಯ ಡಾ.ಗುರುಬಸವ ಮಹಾ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಾಬು ಅಳಿಕಟ್ಟಿಯವರು ತಮ್ಮ ಜೀವನವನ್ನೇ ವಚನ ಸಾಹಿತ್ಯಕ್ಕೆ ಮುಡುಪಾಗಿಟ್ಟಿದ್ದಾರೆ. ವಚನ ಸಾಹಿತ್ಯದ ಸೇವೆ ಮಾಡದಿದ್ದರೆ 23 ಸಾವಿರ ವಚನಗಳು ನಮಗೆ ಸಿಗುತ್ತಿರಲಿಲ್ಲ. 12ನೇ ಶತಮಾನದ ಲ್ಲಿ ಶರಣ, ಶರಣಿಯರು ಆಧ್ಯಾತ್ಮಿಕ ತಳಹದಿ ಮೇಲೆ ಆಚಾರ ಮತ್ತು ವಿಚಾರಗಳಿಗನುಗುಣವಾಗಿ ಸಾಧನೆ ಮಾಡಿದ್ದಾರೆ. ಸೆ.1ರಂದು ಪ್ರಾರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನ ಇಡೀ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದರು.ಸಹಜ ಸಾಗುವಳಿ ಪತ್ರಿಕೆ ಸಂಪಾದಕ ಬೆಂಗಳೂರಿನ ಗಾಯತ್ರಿ ವಿ. ಒಣ ಬೇಸಾಯ ಪದ್ಧತಿ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿ ರೈತರು ಒಂದೇ ಬೆಳೆಯನ್ನು ಬೆಳೆಯದೇ ವಿವಿಧ ಧಾನ್ಯಗಳನ್ನು ಬೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತ್ತರಗಿ ಸಂಸ್ಥಾನ ಮಠದ ಇಳಕಲ್, ಗುರು ಮಹಾಂತ ಶ್ರೀ, ಸಿದ್ದಯ್ಯನಕೋಟೆ, ಬಸವಲಿಂಗ ಶ್ರೀ, ಕೊಟ್ಟೂರು ಗುರುಬಸವೇಶ್ವರ ಸಂಸ್ಥಾನ ಮಠದ ಸೋಮಶಂಕರ ಶ್ರೀ, ಪವಾಡ ಬಸವಣ್ಣ ಮಠ, ನೆಲಮಂಗಲದ ಸಿದ್ದಲಿಂಗ ಶ್ರೀ, ,ಗುರು ಸಿದ್ದಲಿಂಗೇಶ್ವರ ವಿರಕ್ತ ಮಠ, ಗದ್ದಿನಕೆರೆಯ ಇಮ್ಮಡಿ ಮಹಾಂತ ಶ್ರೀ, ಲಿಂಗಸುಗೂರು ಸಿದ್ದಲಿಂಗ ಶ್ರೀ, ಹಿರೇಮಲ್ಲನಕೆರೆ ಚನ್ನಬಸವ ಶ್ರೀ, ಬೀದರನ ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ್ ಧನ್ನೂರು, ನಾಗರಾಜ್ ಹೊಸಕೋಟೆ ಇದ್ದರು.ಕಮ್ಮತ್ತಹಳ್ಳಿ ಗ್ರಾಮದ ನಟ ಮುಖ್ಯಮಂತ್ರಿ ಚಂದ್ರು ಲಿಂ. ಚನ್ನಬಸವ ಶ್ರೀಗಳ ಪುಣ್ಯಸ್ಮರಣೆ, ಬಸವತತ್ವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.