ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸಾಮಾಜಿಕ ಮಾಧ್ಯಮಗಳ ಅಬ್ಬರದಲ್ಲಿ ಕಳೆದು ಹೋಗುತ್ತಿರುವ ಯುವಜನತೆಯನ್ನು ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ, ಸಾಮಾಜಿಕ ಸಂದೇಶಗಳನ್ನು ಬಿತ್ತರಿಸುವ ರಂಗಕಲೆಯತ್ತ ಸೆಳೆಯುವ ಕೆಲಸವನ್ನು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ತುಮಕೂರು ನಿರಂತರವಾಗಿ ಮಾಡುತ್ತಿದೆ ಎಂದು ಹೆಬ್ಬೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಕ್ಕಮ್ಮ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ ನಾಟಕ ಪ್ರಯೋಗದ ಗಣ್ಯ ಪ್ರೇಕ್ಷಕರಾಗಿ ಪಾಲ್ಗೊಂಡು ಮಾತನಾಡಿದರು.ಮನುಷ್ಯನ ಅಭಿವ್ಯಕ್ತಿಗೆ ಪೂರಕವಾಗಿ ರಂಗಕಲೆ ಬೆಳೆದು ಬಂದಿದೆ. ಕಿರುತೆರೆ, ಬೆಳ್ಳಿತೆರೆಗಳ ನಡುವೆ ವಾಸ್ತವಕ್ಕೆ ಹತ್ತಿರವಾಗಿರುವ ರಂಗಕಲೆಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಾಗಿದೆ. ಹಾಗಾಗಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವೂ ಸೇರಿದಂತೆ ನಾಡಿನ ಎಲ್ಲಾ ರಂಗಾಸಕ್ತರಿಗೂ ವೇದಿಕೆ ಕಲ್ಪಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು. ಕನ್ನಡ ಉಪನ್ಯಾಸಕ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಕ್ಕೆ ವಿಶಿಷ್ಟ ಸ್ಥಾನವಿದೆ. ನಾಟಕಗಳಿಗೆ ಮನುಷ್ಯನ ಪಂಚೇದ್ರಿಯಗಳನ್ನು ಉದ್ದಿಪನಗೊಳಿಸುವಂತಹ ಶಕ್ತಿ ಇದೆ. ಹಾಗಾಗಿಯೇ ನಾಟಕ ಎಲ್ಲ ಕಾಲಕ್ಕೆ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸದಾ ಹೊಸತನವನ್ನು ಬಯಸುವುದು ಕನ್ನಡ ರಂಗಭೂಮಿ. ಚಂಪಾ ಅವರ ನಾಟಕಗಳಲ್ಲಿ ಹಾಸ್ಯದ ಜೊತೆಗೆ, ಗಂಭೀರ ವಿಚಾರಗಳನ್ನು ನೋಡುಗರಿಗೆ ತಲುಪಿಸುವ ಕೆಲಸಗಳನ್ನು ಮಾಡುತ್ತಿವೆ. ನಾಟಕಗಳಲ್ಲಿ ಬಳಸಿರುವ ಉತ್ತಕ ಕರ್ನಾಟಕದ ಭಾಷೆ ಗಮನ ಸೆಳೆಯುತ್ತವೆ. ಕವಿ, ಸಾಹಿತಿ, ಹೋರಾಟಗಾರ, ಉಪನ್ಯಾಸಕರಾಗಿ ಬಹಳ ಗಮನ ಸೆಳೆದಿದ್ದರು. ಹೊಸತನಕ್ಕೆ ಹಾತೊರೆಯುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಗೋಕರ್ಣದ ಗೌಡಶಾನಿ ನಾಟಕವನ್ನು ಪ್ರಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ವಿನಯಕುಮಾರ್.ಬಿ.ಜಿ. ಮಾತನಾಡಿ, ಒಟಿಟಿಯಿಂದ ಸಿನಿಮಾ ಥೇಟರ್‌ಗಳಿಗೆ ಹೊಡೆತ ಬಿದ್ದಂತೆ, ಕಿರುತೆರೆಗಳಿಂದ ಕನ್ನಡ ರಂಗಭೂಮಿಯೂ ಕುಂಟುತ್ತಾ ಸಾಗಿದೆ. ಇಂತಹ ಸಮಯದಲ್ಲಿ ಶಿವಕುಮಾರ್ ತಿಮ್ಮಲಾಪುರ ಮತ್ತು ಕಾಂತರಾಜು ಕೌತುಮಾರನಹಳ್ಳಿ ಅವರುಗಳು ಚಂಪಾ ಅವರ ಗೋಕರ್ಣದ ಗೌಡಶಾನಿ ಹೊಸ ನಾಟಕ ಪ್ರದರ್ಶನ ಮುಂದಾಗಿರುವುದು ಸಂತೋಷದ ವಿಚಾರ. ಇವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.ತುಮಕೂರು ವಿವಿ ಸಂಶೋಧನಾರ್ಥಿ ರಾಹುಲ್.ಆರ್., ರಂಗಭೂಮಿಗೆ ಯುವಕರು ಬರಬೇಕೆಂದರೆ ಇದರಲ್ಲಿನ ಸದುದ್ದೇಶ ಜನರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ. ನಮ್ಮ ವೀರಗಲ್ಲು, ಮಾಸ್ತಿ ಕಲ್ಲುಗಳ ಹಿಂದೆ ಅನೇಕ ರೋಚಕ ಕಥೆಗಳಿವೆ. ಅವುಗಳಿಗೆ ನಾಟಕ ರೂಪ ಸಿಕ್ಕಾಗ, ಹೆಚ್ಚು ಜನಪ್ರಿಯಗೊಳ್ಳುತ್ತವೆ. ನೆಟಿವಿಟಿ ಹೆಸರಿನಲ್ಲಿ ಅವುಗಳನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದರು.ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಚನಾ ರಮೇಶ್, ರಂಗಸೊಗಡು ಕಲಾಟ್ರಸ್ಟ್ನ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಡಾ.ಚಂಪಾ ಅವರ ಗೋಕರ್ಣದ ಗೌಡಶಾನಿ ನಾಟಕ ಪ್ರಯೋಗಗೊಂಡಿತ್ತು.
;Resize=(128,128))
;Resize=(128,128))