ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾವಿರ ಪದಗಳಲ್ಲಿ ವಿಶ್ಲೇಷಣೆ ಮಾಡಬಹುದಾದುದನ್ನು ಒಂದು ಛಾಯಾಚಿತ್ರ ತಿಳಿಸುವುದರಿಂದ ಛಾಯಾಚಿತ್ರಕ್ಕಿರುವ ಶಕ್ತಿ ಅಗಾಧವಾದುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಗುರುನಾಥ್ ತಿಳಿಸಿದರು.

ಚಿತ್ರದುರ್ಗ ನಗರದ ಹೂರ ವಲಯದ ಎಂ.ಕೆ.ಹಟ್ಟಿಯಲ್ಲಿನ ಎಸ್‍ಜೆಎಂ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಲಾವಿದ ಜವಳಿ ಶಾಂತಕುಮಾರ ಅವರ ಏಕವ್ಯಕ್ತಿ ಕಲಾ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸಾವಿರ ಪದಗಳು ತಿಳಿಸುವುದನ್ನು ಒಂದು ಛಾಯಾಚಿತ್ರ ಹೇಳುವುದಲ್ಲದೆ ನಮ್ಮ ಮನದಲ್ಲಿ ಬಹಳ ಕಾಲ ಉಳಿಯುತ್ತದೆ. ಚಿತ್ರಕಲಾವಿದರ ಶ್ರಮ ಮತ್ತು ಶ್ರದ್ದೆ ಅತ್ಯಂತ ಪ್ರಶಂಸನೀಯ ಚಿತ್ರಕಲಾವಿದರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲಎಂದರು.

ಮುರುಘಾ ಮಠದ ಸಿಇಓ ಚೆಲುವರಾಜ್ ಮಾತನಾಡಿ ಚಿತ್ರ ಕಲಾವಿದರದು ಸವಾಲಿನ ಕೆಲಸವಾಗಿದ್ದು, ಎಲೆಮರೆಯ ಕಾಯಿಯಂತೆ ಕೆಲಸ ನಿರ್ವಹಿಸುತ್ತಾರೆ ಅವರ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನಗೆ ಚಿತ್ರಗಳನ್ನು ನೋಡಿ ಸಂತೋಷ ಮತ್ತು ನೋವು ಎರಡು ಆಯಿತು. ಕೆಲವು ಚಿತ್ರಗಳು ಜೀವನವನ್ನು ಸುಂದರವಾಗಿಸಿ ಮನಸ್ಸನ್ನು ಉಲ್ಲಾಸಗೊಳಿಸಿದರೆ, ಮತ್ತೆ ಕೆಲವು ಮನಸ್ಸಿಗೆ ನೋವನ್ನು ನೀಡುತ್ತದೆ. ಇದೇ ಛಾಯಾಚಿತ್ರಕ್ಕಿರುವ ಶಕ್ತಿ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ರಾಜೇಶ್ ಕಲಾಕೃತಿಗಳುಳ್ಳ ಕ್ಯಾಟ್‍ಲಾಗ್ ಬಿಡುಗಡೆಗೊಳಿಸಿದರು. ಪ್ರಾಂಶುಪಾಲರಾದ ಗಾಯತ್ರಿ ಬಿ.ಆರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಏನ್.ಎಂ.ಪುಷ್ಪವಲ್ಲಿ, ಚಿತ್ರಕಲಾವಿದರಾದ ನಾಗರಾಜ್ ಬೇದ್ರೆ, ಜವಳಿ ಶಾಂತಕುಮಾರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತ ಕುಮಾರ್ ರವರು ರಚಿಸಿದ ತೈಲ ವರ್ಣ ಹಾಗೂ ಜಲ ವರ್ಣದ 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನ ಮಾಡಿದರು.