ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ 12ನೇ ದಿನವಾದ ಗುರುವಾರ ಉತ್ಖನನ ಕಾರ್ಯ ಮುಂದುವರಿದಿದ್ದು, ಕಲ್ಲಿನ ಮುಕುಟಮಣಿ ಶಿಲೆ ಹಾಗೂ ಅಪರೂಪದ ತ್ರಿಮುಖ ನಾಗಶಿಲೆ, ಮಡಿಕೆ ತುಣಕು ಪತ್ತೆಯಾಗಿವೆ. ಉತ್ಖನನ ಆರಂಭವಾಗುತ್ತಿದ್ದಂತೆ ಗುಂಡಿಯಲ್ಲಿ ಅಡಕೆ ಆಕಾರದ ಕಲ್ಲಿನ ಮುಕುಟಮಣಿ ಶಿಲೆ ಗೋಚರವಾಗಿದೆ
ಗದಗ: ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ 12ನೇ ದಿನವಾದ ಗುರುವಾರ ಉತ್ಖನನ ಕಾರ್ಯ ಮುಂದುವರಿದಿದ್ದು, ಕಲ್ಲಿನ ಮುಕುಟಮಣಿ ಶಿಲೆ ಹಾಗೂ ಅಪರೂಪದ ತ್ರಿಮುಖ ನಾಗಶಿಲೆ, ಮಡಿಕೆ ತುಣಕು ಪತ್ತೆಯಾಗಿವೆ.
ಉತ್ಖನನ ಆರಂಭವಾಗುತ್ತಿದ್ದಂತೆ ಗುಂಡಿಯಲ್ಲಿ ಅಡಕೆ ಆಕಾರದ ಕಲ್ಲಿನ ಮುಕುಟಮಣಿ ಶಿಲೆ ಗೋಚರವಾಗಿದೆ. ಶಿಲೆಯ ಕೆಳಭಾಗದಲ್ಲಿ ರಂದ್ರ ಇರುವುದರಿಂದ ಇದು ದೇವಾಲಯದ ಶಿಲೆಯ ಮೇಲ್ಭಾಗದಲ್ಲಿ ಇರಬಹುದಾದ ಕಿರೀಟ ಅಥವಾ ಅಲಂಕಾರಿಕ ವಸ್ತು ಆಗಿರಬಹುದೆಂದು ಅಂದಾಜಿಸಲಾಗಿದೆ.
ಇನ್ನೊಂದು ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತನೆಯಾದ ಐತಿಹಾಸಿಕ ತ್ರಿಮುಖ ನಾಗಶಿಲೆ ಪತ್ತೆಯಾಗಿದೆ. ತ್ರಿಮುಖಿ, ಪಂಚಮುಖಿ ಹಾಗೂ ಸಪ್ತಮುಖ ನಾಗಶಿಲೆಗಳು ಇರುವ ಸ್ಥಳಗಳಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗಗಳಲ್ಲಿ ಬಹುಕಾಲದಿಂದಲೂ ಇದೆ. ನಿಧಿಯ ಕಾವಲು ಅಥವಾ ಗುರುತಿಗಾಗಿ ನಾಗಶಿಲೆಗಳನ್ನು ಸ್ಥಾಪಿಸಲಾಗುತ್ತಿತ್ತು ಎಂಬ ನಂಬಿಕೆಯಂತೆ, ಲಕ್ಕುಂಡಿಯಲ್ಲಿ ನಿರಂತರವಾಗಿ ನಾಗಶಿಲೆಗಳ ಪತ್ತೆಯಾಗಿ ಕುತುಹೂಲ ಮೂಡಿಸಿದೆ.ಗುರುವಾರ ನವಲಗುಂದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉತ್ಖನನ ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ವೀಕ್ಷಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ಖನನದ ಮಹತ್ವ ಹಾಗೂ ಲಕ್ಕುಂಡಿಯ ಐತಿಹಾಸಿಕ ಹಿನ್ನೆಲೆ ಕುರಿತು ವಿವರಿಸಿದರು.
ಪತ್ತೆಯಾದ ವಸ್ತುಗಳು
ಉತ್ಖನನ ಕೆಳಭಾಗದಲ್ಲಿ ಕಲ್ಲು ಹಾಸಿನ ಪದರಗಳು, ತಳಹದಿ ದೊರೆತಿವೆ. ಇದೇ ತಳಹದಿಯು ಕೋಟೆ ವೀರಭದ್ರೇಶ್ವರ ಮತ್ತು ಮುಂಭಾಗದಲ್ಲಿ ಇರುವ ಸಿದ್ಧರ ಬಾವಿ ನಡುವಿನ ಸಂಪರ್ಕ ಹೊಂದಿದ ತಳಹಾಸು ಎಂಬುದು ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ತಹಸೀಲ್ದಾರ್ ಮೇಲೆ ಹಲ್ಲೆ: ಆರೋಪಿ ಬಂಧನ
ಗದಗ: ರೋಣ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬ್ ಪತ್ರಕರ್ತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಣ ತಹಸೀಲ್ದಾರ್ ನಾಗರಾಜ ಕೆ. ಅವರು ಜ. 25ರ ಮಧ್ಯರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹನುಮಂತ ಚಲವಾದಿ ಮತ್ತು ಶರಣಪ್ಪ ಎನ್ನುವವರ ವಿರುದ್ಧ ದೂರು ನೀಡಿದ್ದರು.ದೂರಿನನ್ವಯ ಯೂಟ್ಯೂಬ್ ಪತ್ರಕರ್ತನೆಂದು ಹೇಳಿಕೊಳ್ಳುತ್ತಿದ್ದ ಹನುಮಂತ ಚಲವಾದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಯುಟ್ಯೂಬ್ ಪತ್ರಕರ್ತ ಹನುಮಂತ ಚಲವಾದಿ, ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದ. ಇಂಥದ್ದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ನಾಗರಾಜ್ ಕೆ. ಅವರು ಪ್ರಿವೆಂಟಿವ್ ಸೆಕ್ಷನ್ ಅಡಿ ಬಾಂಡ್ ಒವರ್(ಮುಚ್ಚಳಿಕೆ) ಪಡೆದುಕೊಂಡಿದ್ದರು.ಆ ಬಾಂಡ್ ಒವರ್ ಹಿಂಪಡೆಯುವಂತೆ ಒತ್ತಾಯಿಸಿ, ಆತ ಜ. 25ರ ಮಧ್ಯರಾತ್ರಿ ಅತಿಕ್ರಮವಾಗಿ ತಹಸೀಲ್ದಾರ್ ನಾಗರಾಜ ಕೆ. ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆ ಆತನನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ ಎಂದರು.