ಉದ್ಘಾಟನೆ ಅಂಗವಾಗಿ ನಗರದಲ್ಲಿ ಡಾ.ಕೋಡಿರಂಗಪ್ಪ ಹಾಗೂ ಕೆ. ಎಮ್.ರೆಡ್ಡಪ್ಪ ರವರ ಮನೆಗಳಲ್ಲೂ ಮನೆಗೊಂದು ಗ್ರಂಥಾಲಯವನ್ನು ಚಾಲನೆಗೊಳಿಸಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭವಾರ್ತೆ ಚಿಕ್ಕಬಳ್ಳಾಪುರ
ಪ್ರತಿಯೊಂದು ಮನೆಯಲ್ಲಿ ಪುಸ್ತಕಗಳನ್ನಿರಿಸಿ ಕುಟುಂಬದ ಸದಸ್ಯರು ಹಾಗೂ ಬಂಧು ಬಾಂಧವರು ನಿರಂತರ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನಾಧಾರಿತ ಸಮಾಜ ನಿರ್ಮಾಣವಾಗುತ್ತದೆಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯ ಪಟ್ಟರು.ನಗರದ ಕನ್ನಡ ಭವನದಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಲ್ಲಿ ಪುಸ್ತಕ ಸಂಸ್ಕೃತಿ ಹಾಗೂ ಓದುವ ಸಮಾಜ ನಿರ್ಮಾಣದ ಆಶಯ ಹೊಂದಿರುವ ಪುಸ್ತಕ ಪ್ರಾಧಿಕಾರವು ಪ್ರತಿ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ನಿರ್ಮಾಣ ಕಾರ್ಯಕ್ರಮ ಆಯೋಜಿಸಿ ಇದರ ಅಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುಸ್ತಕ ಓದುವ ಹವ್ಯಾಸಿಗಳ ಜಾಗೃತಿ ಸಮಿತಿ ರಚಿಸಿ ಜಿಲ್ಲೆಯಾದ್ಯಂತ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವ ಉದ್ದೇಶ ಹೊಂದಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, ಗ್ರಂಥಾಲಯಗಳು ದೇಶದ ಬೌದ್ಧಿಕ, ಸಾಹಿತ್ಯ ,ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ಉನ್ನತಿಯ ಕೇಂದ್ರಗಳಾಗಿದ್ದು ಓದುವ ಸಮಾಜ ನಿರ್ಮಾಣಕ್ಕೆ ಬುನಾದಿಗಳಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಖ್ಯಾತ ಸಾಂಸ್ಕೃತಿಕ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಶಾಲಾ-ಕಾಲೇಜುಗಳು ಮಕ್ಕಳಿಗೆ ಎಂತಹ ಪಠ್ಯಕ್ರಮ ಆಧಾರಿತ ಪುಸ್ತಕಗಳನ್ನು ರೂಪಿಸಿ ಕೊಡುತ್ತವೆ ಎಂಬುದರ ಮೇಲೆ ಸಮಾಜ ಸಾಗುತ್ತದೆ. ಆದ್ದರಿಂದ ಪಠ್ಯಪುಸ್ತಕ ಆಧಾರ ಪುಸ್ತಕಗಳು, ದಿನಪತ್ರಿಕೆಗಳು ನಿಯತಕಾಲಿಕೆಗಳನ್ನು ರೂಪಿಸಿ ಜನತೆಗೆ ಮುಟ್ಟಿಸುವ ಕೆಲಸವನ್ನು ಅತ್ಯಂತ ಕಾಳಜಿ ಬದ್ಧತೆ ಹಾಗೂ ದೂರ ದೃಷ್ಟಿಯಿಂದ ರೂಪಿಸಬೇಕು ಎಂದು ಸಲಹೆ ನೀಡಿದರು.
ಉದ್ಘಾಟನೆ ಅಂಗವಾಗಿ ನಗರದಲ್ಲಿ ಡಾ.ಕೋಡಿರಂಗಪ್ಪ ಹಾಗೂ ಕೆ. ಎಮ್.ರೆಡ್ಡಪ್ಪ ರವರ ಮನೆಗಳಲ್ಲೂ ಮನೆಗೊಂದು ಗ್ರಂಥಾಲಯವನ್ನು ಚಾಲನೆಗೊಳಿಸಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಗೆ ಡಾ. ಕೋಡಿರಂಗಪ್ಪ ,ಎಸ್. ಎನ್ ಅಮೃತ್ ಕುಮಾರ್, ಯಲುವಹಳ್ಳಿ ಸೊಣ್ಣೇಗೌಡ, ಗಿರಿಧರ್ ವೈ .ಇ, ಎನ್ .ವಿ ಶ್ರೀನಿವಾಸ್, ಎಚ್. ಆರ್. ಸುಬ್ರಹ್ಮಣ್ಯ, ತ್ಯಾಗರಾಜ ಎ .ಎಂ, ಕೆ. ಎಂ ರೆಡ್ಡಪ್ಪ, ಪ್ರಮೀಳಾ ಬಿ.ಎಂ, ಮೀರಾ .ಎಸ್, ಮಂಜುಳಾ ಬಿ. ಸಿ, 11 ಜನರ ಸಮಿತಿ ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರದ ಅಧಿಕಾರಿ ಶ್ರೀನಿವಾಸ್ ಕರಿಯಪ್ಪ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಚೆನ್ನಮಲ್ಲಿಕಾರ್ಜುನಯ್ಯ, ಸತೀಶ್, ಮುನಿನಾರಾಯಣಪ್ಪ ಮತ್ತಿತರರು ಇದ್ದರು.