ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭ ನಡೆಯಿತು.

ಗದಗ: ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪರಂಪರೆ ತಾತ್ಕಾಲಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರದ ಅನುಮೋದನೆಯೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ಮುಖಾಂತರ ಸ್ಮಾರಕಗಳು ಮತ್ತು ಸೈಟ್‌ಗಳ ಇಂಟರ್ ನ್ಯಾಷನಲ್ ಕೌನ್ಸಿಲ್‌ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ, ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನ ಚಿಂತಾಮಣಿ ಅತ್ತಿಮಬ್ಬೆ ಅವರ ಸ್ಥಳವಾದ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದೆ. ಈ ಪಾರಂಪರಿಕ ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ದೊರೆತ ಪುರಾತನ ಕಾಲದ ಮಡಿಕೆಯಲ್ಲಿನ ಅಪಾರ ಬೆಲೆಬಾಳುವ ಚಿನ್ನಾಭರಣಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಬಾಲಕನ ಪ್ರಾಮಾಣಿಕತೆಯನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೆಚ್ಚಿಕೊಂಡಿದೆ. ಅವರ ಕುಟುಂಬಕ್ಕೆ ಗೌರವ ಸಲ್ಲಿಸುವದರೊಂದಿಗೆ ಮಾನವೀಯತೆ ಆಧಾರದ ಮೇಲೆ ಬಡ ಕುಟುಂಬಕ್ಕೆ ಮನೆ, ತಾಯಿಗೆ ಉದ್ಯೋಗ, ಬಾಲಕನಿಗೆ ಶಿಕ್ಷಣ ಒದಗಿಸಲು ಹಾಗೂ ಕಾನೂನು ಪ್ರಕಾರ ಆತನ ಕುಟುಂಬಕ್ಕೆ ಸಿಗಬೇಕಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

6 ಸ್ಮಾರಕ ಸಂರಕ್ಷಣೆಗೆ ₹10.16 ಕೋಟಿ: ಪ್ರಸಕ್ತ ಸಾಲಿನಲ್ಲಿ ಲಕ್ಕುಂಡಿ ಪಾರಂಪರಿಕ ವಿರೂಪಾಕ್ಷ ದೇವಾಲಯ ಸಂರಕ್ಷಣೆ, ಮಲ್ಲಿಕಾರ್ಜುನ ದೇವಾಲಯ ಹಾಗೂ ಗದ್ದುಗೆ ಸಂರಕ್ಷಣೆ, ಚಂದ್ರಮೌಳೇಶ್ವರ ದೇವಾಲಯ ಸಂರಕ್ಷಣೆ, ಹಾಲಗುಂಡಿ ಬಸವಣ್ಣ ದೇವಾಲಯ ಸಂರಕ್ಷಣೆ ಕಾಮಗಾರಿ, ಕಣ್ಣೀರ ಬಾವಿ ಸಂರಕ್ಷಣೆ ಕಾಮಗಾರಿ, ಕಲ್ಮಠ ಬಾವಿ ಹಾಗೂ ಕಾಂಪೌಂಡ್ ಗೋಡೆ ಕಾಮಗಾರಿಗಳಿಗೆ ₹10.16 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಐತಿಹಾಸಿಕ, ಧಾರ್ಮಿಕ ಹಾಗೂ ಆಧಾತ್ಮಿಕ ಪ್ರವಾಸೋದ್ಯಮ ಉತ್ತೇಜಿಸಲು ಶಿರಹಟ್ಟಿ ತಾಲೂಕಿನ ಹೊಳಲಮ್ಮ ದೇವಿ ದೇವಸ್ಥಾನ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗೆ ₹6.47 ಕೋಟಿ, ಗದಗ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ಲಕ್ಕುಂಡಿ ಸೇರಿದಂತೆ ಗದಗ ಜಿಲ್ಲೆಯ 22 ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಲಭ್ಯ ಅಭಿವೃದ್ದಿ ಕಾಮಗಾರಿಗಳಿಗೆ ₹13.05 ಕೋಟಿ ಬಿಡುಗಡೆ ಮಾಡಲಾಗಿದೆ. ಪರಿಸರ ಹಾಗೂ ವನ್ಯಜೀವಿ ಪ್ರವಾಸೋದ್ಯಮ ಉತ್ತೇಜಿಸಲು ಕಪ್ಪತ್ತಗುಡ್ಡ ಗದಗ ಮೃಗಾಲಯ ವಿಸ್ತರಣೆ, ಮಾಗಡಿ ಕೆರೆ ಅಭಿವೃದ್ಧಿಗಾಗಿ ಒಟ್ಟು 4 ಕಾಮಗಾರಿಗಳಿಗೆ ₹22.50 ಕೋಟಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದ ಅವರು, ಪಂಚ ಗ್ಯಾರಂಟಿ ಯೋಜನೆಗಳ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.