ಯೋಗ ಮತ್ತು ಪ್ರಾಣಾಯಾಮ ನಮ್ಮ ಜೀವನದ ಅವಿಭಾಜ್ಯ ಅಂಗವಾದರೆ ನಾನಾ ರೋಗಗಳಿಂದ ಮುಕ್ತಿ ಪಡೆಯಬಹುದು

ಹಗರಿಬೊಮ್ಮನಹಳ್ಳಿ: ಬದಲಾದ ಜೀವನದಲ್ಲಿನ ಆಧುನಿಕ ಶೈಲಿ ಇಡೀ ಸಮುದಾಯದ ನಾನಾ ರೋಗ ರುಜಿನಗಳಿಗೆ ಕಾರಣವಾಗುತ್ತಿದ್ದು, ರೋಗ ಬಾರದಂತೆ ತಡೆಯುವ ಜತೆಗೆ ನಮ್ಮ ಆರೋಗ್ಯ ವರ್ಧನೆಗೆ ಪ್ರಕೃತಿ ಚಿಕಿತ್ಸೆಗೆ ಒತ್ತು ನೀಡಬೇಕು ಎಂದು ಹರಪನಹಳ್ಳಿಯ ಜನನಿ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಪ್ರತಿಪಾದಿಸಿದರು.

ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದಲ್ಲಿ ದೊಡ್ಡ ಬಸವೇಶ್ವರ ಸ್ವಾಮಿಯ ೪೨ನೇ ರಥೋತ್ಸವ ನಿಮ್ಮಿತ್ತ, ಶ್ರೀ ಮಠ, ದೊಡ್ಡಬಸವೇಶ್ವರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರದ ನೇತೃತ್ವ ವಹಿಸಿ ಅವರು ಮಾತನಾಡಿ, ಯೋಗ ಮತ್ತು ಪ್ರಾಣಾಯಾಮ ನಮ್ಮ ಜೀವನದ ಅವಿಭಾಜ್ಯ ಅಂಗವಾದರೆ ನಾನಾ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು.

ಆಸ್ಪತ್ರೆಯ ಮಾಧ್ಯಮ ಮುಖ್ಯಸ್ಥ ಉದಯಶಂಕರ್ ಭಟ್ ಮಾತನಾಡಿ, ಯೋಗದಿಂದ ರೋಗಿ ನಿರೋಗಿಯಾಗುತ್ತಾನೆ. ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನೀಡಿರುವ ಮಹತ್ವದ ಅಂಶಗಳನ್ನು ಮರೆಯದೇ ಔಷಧ ರಹಿತವಾಗಿಯೂ ಪ್ರಕೃತಿಯ ಮೂಲಕ ಚಿಕಿತ್ಸಾ ಪದ್ಧತಿ ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಹಂಪಸಾಗರ ಮಹಾದೇವ ತಾತ ಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಕೊಟ್ಟೂರಿನ ಡಾ.ಸಿದ್ದಲಿಂಗ ಶಿವಾಚಾರ್ಯ, ಹನಸಿ ಮಠದ ಸೋಮಶಂಕರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ, ಸಾಗರ ಶಿವಾಚಾರ್ಯ, ಹಿರೇಮಲ್ಲಿನ ಕೇರಿಯ ಚನ್ನಬಸವ ಸ್ವಾಮೀಜಿ ಶಿಬಿರಕ್ಕೆ ಭೇಟಿ ನೀಡಿದರು.

ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ೩೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪ್ರಯೋಜನ ಪಡೆದರು. ಕೂಡ್ಲಿಗಿಯ ಸೃಷ್ಟಿ ಯೋಗ ಟ್ರಸ್ಟನ ಸುಮಲತಾ, ಪ್ರಾಧ್ಯಾಪಕ ಡಾ.ಜಯರಾಮ್ ಪಾಲ್ಗೊಂಡಿದ್ದರು.