ಬೆಂಗಳೂರು : 7 ವರ್ಷದ ಬಳಿಕ ಬೀದಿ ಬದಿ ವ್ಯಾಪಾರಿಗಳ ಸರ್ವೆ

| Published : Jul 12 2024, 01:32 AM IST / Updated: Jul 14 2024, 11:14 AM IST

ಸಾರಾಂಶ

7 ವರ್ಷದ ಬಳಿಕ ರಾಜಧಾನಿ ಬೆಂಗಳೂರಿನ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ಗುರುತಿಸುವ ಕಾರ್ಯಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸರ್ವೆ ಕಾರ್ಯ ಶುರು ಮಾಡಲಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಬರೋಬ್ಬರಿ 7 ವರ್ಷದ ಬಳಿಕ ರಾಜಧಾನಿ ಬೆಂಗಳೂರಿನ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ಗುರುತಿಸುವ ಕಾರ್ಯಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲಿ ಸರ್ವೆ ಕಾರ್ಯ ಶುರು ಮಾಡಲಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು 2014ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸುವುದು ಮತ್ತು ಅವರ ಸ್ಥಿತಿಗತಿ ಆಧರಿಸಿ ಯೋಜನೆಗಳನ್ನು ರೂಪಿಸುವುದು, ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ.

ಆ ಪ್ರಕಾರ ಬಿಬಿಎಂಪಿಯು 2017ರಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಸುಮಾರು 25 ಸಾವಿರ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಬಿಬಿಎಂಪಿ ಗುರುತಿನ ಚೀಟಿ ನೀಡಲಾಗಿತ್ತು. ಆ ಬಳಿಕ ಬಿಬಿಎಂಪಿಯು ಸರ್ವೆ ಮಾಡುವುದಕ್ಕೆ ಮುಂದಾಗಿರಲಿಲ್ಲ. ಇದೀಗ ಮತ್ತೆ ಬೀದಿ ಬದಿ ವ್ಯಾಪಾರಿಗಳ ಸರ್ವೆಗೆ ಮುಂದಾಗಿದೆ.

ಬಿಬಿಎಂಪಿಯಿಂದಲೇ ಸರ್ವೆ:

ಈ ಹಿಂದೆ 2022ರಲ್ಲಿ ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸುವುದಕ್ಕೆ ಬಿಬಿಎಂಪಿ ಟೆಂಡರ್ ಆಹ್ವಾನಿಸಿ ಖಾಸಗಿ ವ್ಯಕ್ತಿಗಳಿಂದ ಸರ್ವೆ ಮಾಡಿಸುವುದಕ್ಕೆ ಮುಂದಾಗಿತ್ತು. ಆಗ ಬೀದಿ ಬದಿ ವ್ಯಾಪಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜತೆಗೆ, ಒಬ್ಬರು ಮಾತ್ರ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಟೆಂಡರ್ ರದ್ದುಪಡಿಸಿತ್ತು. ಇದೀಗ ಬೀದಿ ಬದಿ ವ್ಯಾಪಾರಿಗಳ ಸಂಘಗಳ ಬೇಡಿಕೆಯಂತೆ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯಿಂದಲೇ ಸರ್ವೆ ಮಾಡಿಸುವುದಕ್ಕೆ ನಿರ್ಧರಿಸಿದೆ.

ಸರ್ವೆಗೆ ಆ್ಯಪ್‌ ಸಿದ್ಧ

ವಲಯವಾರು ಸರ್ವೆ ನಡೆಸುವುದಕ್ಕೆ ಎಂಟು ವಲಯಗಳಿಗೆ ಪ್ರತ್ಯೇಕ ಆ್ಯಪ್‌ ಅನ್ನು ಬಿಬಿಎಂಪಿ ಸಿದ್ಧಪಡಿಸಿಕೊಂಡಿದೆ. ಆ್ಯಪ್‌ ನಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ಥಳ, ಫೋಟೋ, ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ಆ್ಯಪ್‌ ನಲ್ಲಿಯೇ ದಾಖಲು ಮಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಎರಡು ತಿಂಗಳ ಕಾಲಾವಧಿ:

ನಗರದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. 1500 ಅಧಿಕಾರಿ, ಸಿಬ್ಬಂದಿ ತಂಡ ರಚನೆ ಮಾಡಲಾಗುತ್ತದೆ. ಎಲ್ಲಾ ವಲಯದಲ್ಲಿ ಸರ್ವೆ ನಡೆಸಿ ವರದಿ ಸಿದ್ಧಪಡಿಸುವುದಕ್ಕೆ 2 ತಿಂಗಳು ಕಾಲಾವಕಾಶ ಬೇಕಾಗಲಿದೆ ಎಂದು ಪಾಲಿಕೆ ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರ್‌ಆರ್‌ ನಗರ ವಲಯದಿಂದ ಶುರು

ಸದ್ಯಕ್ಕೆ ರಾಜರಾಜೇಶ್ವರಿನಗರ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸುವುದಕ್ಕೆ ವಲಯದ ಪಟ್ಟಣ ವ್ಯಾಪಾರ ಸಮಿತಿಯ ಸಭೆಯಲ್ಲಿ ನಿರ್ಣಯವಾಗಿದೆ. ಹೀಗಾಗಿ, ಅಲ್ಲಿಂದ ಸರ್ವೆ ಕಾರ್ಯ ಆರಂಭಿಸಲಾಗುವುದು. ಇನ್ನುಳಿದ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸುವುದಕ್ಕೆ ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅನುಮೋದನೆ ಆಗಬೇಕಿದೆ. ಆ ನಂತರ ಸರ್ವೆ ಕಾರ್ಯ ಶುರುವಾಗಲಿದೆ.

ಸಮಿತಿ ಸಭೆಗೆ ಅಧಿಕಾರಿಗಳ ನಿರಾಸಕ್ತಿ

ಪ್ರತಿ ವಲಯದ ಪಟ್ಟಣ ವ್ಯಾಪಾರಿ ಸಮಿತಿಗೆ ಜಂಟಿ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಆರ್‌ಆರ್‌ನಗರ ಹೊರತು ಪಡಿಸಿದರೆ, ಉಳಿದ ಯಾವುದೇ ವಲಯದಲ್ಲಿ ಸಮಿತಿ ಸಭೆ ನಡೆಸಿಲ್ಲ. ಹೀಗಾಗಿ, ಸರ್ವೆ ನಡೆಸುವುದಕ್ಕೆ ಅನುಮೋದನೆ ದೊರೆತ್ತಿಲ್ಲ. ಸಭೆ ನಡೆಸುವುದಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಆಸಕ್ತಿ ಇಲ್ಲ ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್‌.ಬಾಬು ಆರೋಪಿಸಿದ್ದಾರೆ.

ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸರ್ವೆ ನಡೆಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಆರ್‌ಆರ್‌ ನಗರ ವಲಯದಲ್ಲಿ ಶೀಘ್ರದಲ್ಲಿ ಸರ್ವೆ ಕಾರ್ಯ ಆರಂಭಿಸಲಾಗುವುದು. ಪಾಲಿಕೆ ಅಧಿಕಾರಿ ಸಿಬ್ಬಂದಿಯೇ ಸರ್ವೆ ನಡೆಸಲಿದ್ದು, ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿ ಪಡಿಸಿಕೊಳ್ಳಲಾಗಿದೆ.

-ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಕಲ್ಯಾಣ ವಿಭಾಗ.