ಗುಡ್ಡೆಹೊಸೂರು ಗ್ರಾಪಂಗೆ ತಮಿಳುನಾಡಿನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ತಂಡ ಭೇಟಿ

| Published : Aug 20 2025, 02:00 AM IST

ಗುಡ್ಡೆಹೊಸೂರು ಗ್ರಾಪಂಗೆ ತಮಿಳುನಾಡಿನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡು ರಾಜ್ಯದ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜ್ಯಕ್ಕೆ ಕೈಗೊಂಡ ಅಧ್ಯಯನ ಪ್ರವಾಸದ ಭಾಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ತಮಿಳುನಾಡು ರಾಜ್ಯದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಮೂವತ್ತು ಸದಸ್ಯರ ತಂಡವು, ಕರ್ನಾಟಕದಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯವೈಖರಿ ಯೋಜನೆ ಮತ್ತು ಮೇಲ್ವಿಚಾರಣೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಚನೆಗಳ ಅನುಷ್ಠಾನ ವಿನೂತನ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸೂಕ್ತವಾದವುಗಳನ್ನು ಅನುಕರಣೆ ಮಾಡುವ ಉದ್ದೇಶದಿಂದ ರಾಜ್ಯಕ್ಕೆ ಕೈಗೊಂಡ ಅಧ್ಯಯನ ಪ್ರವಾಸದ ಭಾಗವಾಗಿ ಮಂಗಳವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು.

ಅಧ್ಯಯನ ತಂಡದ ನೇತೃತ್ವವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇಲ್ಲಿನ ಬೋಧಕರಾದ ಟಿ ಎಂ ಅಬೂಬಕರ್ ಹಾಗೂ ಶಶಿಕುಮಾರ್ ರವರು ವಹಿಸಿದ್ದರು.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತಂಡವು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಿ ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯ ವಿಧಾನ ವಿಶೇಷವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ವಿನೂತನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕ, ಕುಡಿಯುವ ನೀರಿನ ಫಿಲ್ಟರ್ ಶಾಲಾ ಉದ್ಯಾನವನಗಳು, ಡಿಜಿಟಲ್ ಗ್ರಂಥಾಲಯ ಇತ್ಯಾದಿಗಳಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಸಂಜೀವಿನಿ ಒಕ್ಕೂಟದ ವತಿಯಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಒಕ್ಕೂಟದ ಸದಸ್ಯರಿಂದ ಹಮ್ಮಿಕೊಳ್ಳಲಾಯಿತು

ಈ ಸಂದರ್ಭ ಕುಶಲನಗರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳಾದ ಪರಮೇಶ್ ಕುಮಾರ್ ಅವರು ಉಪಸ್ಥಿತರಿದ್ದರು. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುಮೇಶ್ ಎಂ ಆರ್ ರವರು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ವಿನೂತನ ಕಾರ್ಯಕ್ರಮಗಳನ್ನು ಪರಿಚಯಿಸಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೌಮ್ಯ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಆಡಳಿತ ಮಂಡಳಿಯ ಸರ್ವ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.